ಲಖ್ನೋ: ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದ ವ್ಯಕ್ತಿಯೊಬ್ಬ 7 ತಾಸು ಶವಾಗಾರದ ಫ್ರೀಜರ್ ನಲ್ಲಿದ್ದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಎಲೆಕ್ಟ್ರಿಷಿಯನ್ ಶ್ರೀಕೇಶ್ ಕುಮಾರ್(40) ಗುರುವಾರ ರಾತ್ರಿ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದು, ಅವರನ್ನು ಮೊರಾದಾಬಾದ್ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪರೀಕ್ಷೆ ನಡೆಸಿದ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ಮೃತದೇಹವನ್ನು ಶವಾಗಾರದ ಫ್ರೀಜರ್ ನಲ್ಲಿ ಇಟ್ಟಿದ್ದಾರೆ.
7 ಗಂಟೆಯ ನಂತರ ಮೃತದೇಹ ಗುರುತಿಸಿ ಮರಣೋತ್ತರ ಪರೀಕ್ಷೆಗೆ ಒಪ್ಪಿಗೆ ನೀಡಲಾಗಿದೆ. ಕುಟುಂಬದ ಸದಸ್ಯರು ಸಹಿ ಮಾಡಿದ ಪಂಚನಾಮೆ ಪೊಲೀಸರಿಗೆ ಸಲ್ಲಿಸಲು ಮುಂದಾದಾಗ ಶ್ರೀಕುಮಾರ್ ಅವರ ಕೈ ಚಲನೆ ಕಂಡು ಬಂದಿದೆ. ಶ್ರೀಕೇಶ್ ಕೈ ಅಲ್ಲಾಡುವುದು ಕಂಡುಬಂದ ಕೂಡಲೇ ಅವರ ಸೊಸೆ ಮಧುಬಾಲಾ, ಅವರು ಮೃತಪಟ್ಟಿಲ್ಲ, ಇದೆಲ್ಲ ಹೇಗಾಯಿತು ಎಂದು ಹೇಳಿದ್ದಾಳೆ. ಈ ವಿಡಿಯೋ ವೈರಲ್ ಆಗಿದೆ.
ಮೊರಾದಾಬಾದ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ ಶಿವ ಸಿಂಗ್, ತುರ್ತು ವೈದ್ಯಕೀಯ ಅಧಿಕಾರಿಯು ಮುಂಜಾನೆ 3 ಗಂಟೆಗೆ ರೋಗಿಯನ್ನು ನೋಡಿದ್ದಾರೆ. ರೋಗಿಗೆ ಹೃದಯ ಬಡಿತ ಇರಲಿಲ್ಲ. ಅವರು ವ್ಯಕ್ತಿಯನ್ನು ಹಲವು ಬಾರಿ ಪರೀಕ್ಷಿಸಿದ ನಂತರ ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಗಿದೆ. ಆದರೆ ಬೆಳಿಗ್ಗೆ ಪೊಲೀಸರ ತಂಡ ಮತ್ತು ಕುಟುಂಬದವರು ಜೀವಂತವಾಗಿರುವುದನ್ನು ಗಮನಿಸಿದ್ದಾರೆ. ಪ್ರಕರಣದ ತನಿಖೆಗೆ ಆದೇಶಿಸಲಾಗಿದೆ. ಸದ್ಯಕ್ಕೆ ಆತನ ಜೀವ ವುಳಿಸುವುದು ನಮ್ಮ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ.
ಇದು ಅಪರೂಪದಲ್ಲಿಯೇ ಅಪರೂಪದ ಪ್ರಕರಣವಾಗಿದ್ದು, ಇದನ್ನು ನಿರ್ಲಕ್ಷ್ಯ ಎಂದು ಹೇಳಲಾಗದು ಎಂದು ಶಿವ ಸಿಂಗ್ ತಿಳಿಸಿದ್ದಾರೆ. ಶ್ರೀಕೇಶ್ ನನ್ನು ಮೀರತ್ ಆಸ್ಪತ್ರೆಗೆ ದಾಖಲಿಸಿದ್ದು, ಆತನ ಪರಿಸ್ಥಿತಿ ಸುಧಾರಿಸಿದೆ. ನಿರ್ಲಕ್ಷ್ಯ ತೋರಿ ಮೃತಪಟ್ಟಿದ್ದಾನೆ ಎಂದು ಹೇಳಿದ್ದ ವೈದ್ಯರ ವಿರುದ್ಧ ದೂರು ನೀಡಲಾಗುವುದು ಎಂದು ಕುಟುಂಬದವರು ಹೇಳಿದ್ದಾರೆ.