ರಾಂಪುರ್: ವಯಸ್ಕ ಯುವತಿಯರ ಲಿವ್ ಇನ್ ರಿಲೇಶನ್ ಶಿಪ್ ಗೆ ಉತ್ತರಪ್ರದೇಶ ಕೋರ್ಟ್ ಅನುಮತಿ ನೀಡಿದೆ. ತನ್ನ ಸ್ನೇಹಿತೆಯೊಂದಿಗೆ ಸಂಬಂಧ ಹೊಂದಿದ್ದ ಯುವತಿ ಆಕೆಯೊಂದಿಗೆ ಇರುವ ಉದ್ದೇಶದಿಂದ ಮನೆ ಬಿಟ್ಟಿರುವುದಾಗಿ ಹೇಳಿಕೆ ನೀಡಿದ್ದು, ಕೋರ್ಟ್ ಇಬ್ಬರು ಯುವತಿಯರು ಒಟ್ಟಿಗೆ ವಾಸಿಸಲು ಅನುಮತಿ ನೀಡಿದೆ.
ಉತ್ತರಪ್ರದೇಶದ ರಾಂಪುರ್ ನ್ಯಾಯಾಲಯ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದ ಯುವತಿಯರಿಗೆ ಒಟ್ಟಿಗೆ ಇರಲು ಅವಕಾಶ ಕಲ್ಪಿಸಿದೆ. ಒಂದು ತಿಂಗಳ ಹಿಂದೆ 20 ವರ್ಷ ವಯಸ್ಸಿನ ಯುವತಿ ಕಾಣೆಯಾಗಿದ್ದು, ರಾಂಪುರದ ಶಹಾಬಾದ್ ಪ್ರದೇಶದಲ್ಲಿ ಸ್ನೇಹಿತೆಯ ಮನೆಯಲ್ಲಿದ್ದಳು. ಮಗಳು ನಾಪತ್ತೆಯಾಗಿದ್ದ ಬಗ್ಗೆ ಜುಲೈನಲ್ಲಿ ಆಕೆಯ ಪೋಷಕರು ದೂರು ದಾಖಲಿಸಿದ್ದರು. ಆಕೆ ಸ್ನೇಹಿತೆಯೊಂದಿಗೆ ಸಂಬಂಧ ಹೊಂದಿದ್ದು, ಆಕೆಯೊಂದಿಗೆ ಇರುವ ಉದ್ದೇಶದಿಂದ ಮನೆ ಬಿಟ್ಟಿರುವುದಾಗಿ ಹೇಳಿಕೆ ನೀಡಿದ್ದಾಳೆ.
ರಾಂಪುರ್ ಮ್ಯಾಜಿಸ್ಟ್ರೇಟ್ ಎದುರು ಇಬ್ಬರನ್ನು ಹಾಜರುಪಡಿಸಿದಾಗ ಅವರು ವಯಸ್ಕರಾಗಿದ್ದು ಜೊತೆಯಾಗಿರುವುದಾಗಿ ಹೇಳಿರುವುದರಿಂದ ಒಟ್ಟಿಗೆ ವಾಸಿಸಲು ಅನುಮತಿ ನೀಡುವುದಾಗಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.
ಯುವತಿಯರ ಕುಟುಂಬದವರು ಅವರ ಮನವೊಲಿಸಲು ಪ್ರಯತ್ನ ನಡೆಸಿದರೂ ಪ್ರಯೋಜನವಾಗಿಲ್ಲ. ಕೋರ್ಟ್ ತೀರ್ಪು ನೀಡಿದ ನಂತರದಲ್ಲಿ ಅವರು ಒಟ್ಟಿಗೆ ವಾಸಿಸಲು ಅವಕಾಶ ಕೊಡಿ, ತೊಂದರೆ ಕೊಡಬೇಡಿ ಎಂದು ಪೊಲೀಸರು ಯುವತಿಯರ ಕುಟುಂಬದವರಿಗೆ ತಿಳಿಸಿದ್ದಾರೆ.