ಉತ್ತರ ಪ್ರದೇಶದ ಕೌಶಂಬಿಯಲ್ಲಿ 21 ವರ್ಷದ ಪುತ್ರಿಯನ್ನು ಆಕೆಯ ಪೋಷಕರು ಕತ್ತು ಹಿಸುಕಿ ಕೊಂದಿದ್ದಾರೆ. ಆಕೆಯ ಬಳಿ ಗರ್ಭಧಾರಣೆಯ ಪರೀಕ್ಷೆಯ ಕಿಟ್‌ಗಳು ಸಿಕ್ಕಿದ ನಂತರ ಆಕೆ ಯಾವುದೋ ಹುಡುಗನೊಂದಿಗೆ ಸಂಬಂಧದಲ್ಲಿರುವುದಾಗಿ ಶಂಕಿಸಿ ಕೃತ್ಯವೆಸಗಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ದಂಪತಿಗಳು ತಮ್ಮ ಇಬ್ಬರು ಸಂಬಂಧಿಕರ ಸಹಾಯದಿಂದ ಮೃತದೇಹವನ್ನು ಗುರುತಿಸಲು ಸಾಧ್ಯವಾಗದಂತೆ ಆಸಿಡ್ ಸುರಿದು ನಂತರ ಎಸೆದಿದ್ದಾರೆ. ನಾಲ್ವರನ್ನೂ ಬಂಧಿಸಲಾಗಿದೆ.
ಕೌಶಂಬಿಯ ಟೆನ್ ಷಾ ಅಲಮಾಬಾದ್ ಗ್ರಾಮದ ನಿವಾಸಿ ನರೇಶ್ ಅವರು ಫೆಬ್ರವರಿ 3 ರಂದು ತಮ್ಮ ಮಗಳು ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದರು. ಮಂಗಳವಾರ ಗ್ರಾಮದ ಹೊರಗಿನ ಕಾಲುವೆಯಿಂದ ಆಕೆಯ ದೇಹ ವಿರೂಪಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.
ನರೇಶ್ ಮತ್ತು ಅವರ ಪತ್ನಿ ಶೋಭಾದೇವಿ ಫೆಬ್ರವರಿ 3 ರಂದು ಮನೆಯಲ್ಲಿ ತಮ್ಮ ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಿರುವುದು ತನಿಖೆಯ ವೇಳೆ ಪತ್ತೆಯಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಬ್ರಿಜೇಶ್ ಕುಮಾರ್ ಶ್ರೀವಾಸ್ತವ ಬುಧವಾರ ಹೇಳಿದ್ದಾರೆ.
ಗುರುತು ಮರೆಮಾಚಲು ಶವದ ಮೇಲೆ ಬ್ಯಾಟರಿ ಆ್ಯಸಿಡ್ ಸುರಿದಿದ್ದಾರೆ. ನರೇಶ್ ಅವರ ಇಬ್ಬರು ಸಹೋದರರಾದ ಗುಲಾಬ್ ಮತ್ತು ರಮೇಶ್ ಕೂಡ ಶವವನ್ನು ಮರೆಮಾಚಲು ಸಹಾಯ ಮಾಡಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ.
ತನ್ನ ಮಗಳು ಅನೇಕ ಹುಡುಗರೊಂದಿಗೆ ಮೊಬೈಲ್ ಫೋನ್ ನಲ್ಲಿ ಮಾತನಾಡುತ್ತಿದ್ದಳು. ಆಕೆ ಬಳಿ ಕೆಲವು ಗರ್ಭಧಾರಣೆ ಪರೀಕ್ಷೆಯ ಕಿಟ್ ಗಳೂ ಪತ್ತೆಯಾಗಿದ್ದು, ಇದರಿಂದ ನರೇಶ್ ತನ್ನ ಮಗಳು ಯಾವುದೋ ಹುಡುಗನೊಂದಿಗೆ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ಕೋಪಗೊಂಡು ಪತ್ನಿ, ಸಂಬಂಧಿಕರಿಬ್ಬರ ನೆರವಿನಿಂದ ಕೊಲೆ ಮಾಡಿ ಮೃತದೇಹ ಎಸೆದಿದ್ದಾನೆ ಎಂದು ಎಸ್ಪಿ ತಿಳಿಸಿದ್ದಾರೆ.