ಹೈದರಾಬಾದ್: ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಶನ್ ಚುನಾವಣೆ ಪ್ರಚಾರ ಜೋರಾಗಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಯೋಗಿ ಆದಿತ್ಯನಾಥ್ ಶನಿವಾರ ಹೈದರಾಬಾದ್ ನಲ್ಲಿ ಮೆಗಾ ರೋಡ್ ಶೋ ನಡೆಸಿದ್ದಾರೆ.
ಮಲ್ಕನ್ ಗಿರಿ ಪ್ರದೇಶದಲ್ಲಿ ರೋಡ್ ಶೋ ನಡೆಸಿದ ಯೋಗಿ, ಪಕ್ಷದ ಅಭ್ಯರ್ಥಿಗಳ ಪರವಾಗಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ಡಿಸೆಂಬರ್ 1 ರಂದು ನಡೆಯಲಿರುವ ಹೈದರಾಬಾದ್ ಪಾಲಿಕೆ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಕಾರ್ಯತಂತ್ರ ರೂಪಿಸಿದೆ. ಉಚಿತ ವಿದ್ಯುತ್, ನೀರು ಪೂರೈಕೆ, ಮಹಿಳೆಯರಿಗೆ ಮೆಟ್ರೋ, ಮಹಾನಗರ ಸಾರಿಗೆಯಲ್ಲಿ ಉಚಿತ ಪ್ರಯಾಣ ಸೇರಿದಂತೆ ಹಲವು ಭರವಸೆಗಳನ್ನು ಒಳಗೊಂಡ ಪ್ರಣಾಳಿಕೆ ಬಿಡುಗಡೆ ಮಾಡಿದೆ.
ಶುಕ್ರವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೈದರಾಬಾದ್ ನಲ್ಲಿ ಪ್ರಚಾರ ನಡೆಸಿದ್ದರು. ಇದಾದ ಮರು ದಿನವೇ ಯೋಗಿ ಆದಿತ್ಯನಾಥ್ ರೋಡ್ ಶೋ, ರ್ಯಾಲಿ ಮೂಲಕ ಪ್ರಚಾರ ಕೈಗೊಂಡಿದ್ದಾರೆ. ನಾಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೈದರಾಬಾದ್ ನಲ್ಲಿ ಪ್ರಚಾರ ನಡೆಸಲಿದ್ದಾರೆ.
ಪ್ರಚಾರದ ವೇಳೆ ಮಾತನಾಡಿದ ಯೋಗಿ ಆದಿತ್ಯನಾಥ್ ಅವರು, ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ 370ನೇ ವಿಧಿಯನ್ನು ರದ್ದುಪಡಿಸಿದ್ದಾರೆ. ಹೈದರಾಬಾದ್ ಮತ್ತು ತೆಲಂಗಾಣದ ಜನರು ಈಗ ಜಮ್ಮು ಮತ್ತು ಕಾಶ್ಮೀರದಲ್ಲಿ ಭೂಮಿ ಖರೀದಿಸಲು ಸಂಪೂರ್ಣ ಸ್ವಾತಂತ್ರ್ಯವಿದೆ ಎಂದು ಹೇಳಿದ್ದಾರೆ.