ಲಖ್ನೋ: ಉತ್ತರಪ್ರದೇಶದ ಶ್ರಾವಸ್ತಿಯಲ್ಲಿ 250 ರೂ. ಶಾಲಾ ಶುಲ್ಕಕ್ಕಾಗಿ 3ನೇ ತರಗತಿ ವಿದ್ಯಾರ್ಥಿಯನ್ನು ಶಿಕ್ಷಕರು ಹೊಡೆದು ಕೊಂದಿದ್ದಾರೆ.
ಸಿರ್ಸಿಯಾದ ಪಂಡಿತ್ ಬ್ರಹ್ಮದತ್ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಯಾಗಿದ್ದ 13 ವರ್ಷದ ಬಾಲಕನನ್ನು ಶಿಕ್ಷಕರು ಹೊಡೆದು ಕೊಂದಿದ್ದಾರೆ. ಶಾಲಾ ಶುಲ್ಕವಾಗಿ 250 ರೂಪಾಯಿ ಪಾವತಿಸದ ಕಾರಣಕ್ಕೆ ಆರೋಪಿ ಅನುಪಮ್ ಪಾಠಕ್ ಬಾಲಕನಿಗೆ ಥಳಿಸಿದ್ದಾನೆ. ಈ ಘಟನೆ ಆಗಸ್ಟ್ 8 ರಂದು ನಡೆದಿದೆ. ಬ್ರಿಜೇಶ್ ಕುಮಾರ್ ಎಂದು ಗುರುತಿಸಲಾದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ತಪ್ಪಿತಸ್ಥ ಶಿಕ್ಷಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಬಾಲಕನ ಹಿರಿಯ ಸಹೋದರ ಬ್ರಿಜೇಶ್ ಕಳೆದ ಎರಡು ತಿಂಗಳ ಹಿಂದೆ ಶಾಲೆಗೆ ದಾಖಲಾಗಿದ್ದು, ಮೊದಲ ತಿಂಗಳ ಶುಲ್ಕವನ್ನು ಪಾವತಿಸಿದ್ದರು. ಕುಟುಂಬಕ್ಕೆ ಆಧಾರವಾಗಿರುವ ಅವರ ಸಹೋದರ ಕೆಲಸದಿಂದ ಹೊರಗುಳಿದಿದ್ದರಿಂದ ಎರಡನೇ ತಿಂಗಳು ಶುಲ್ಕ ಪಾವತಿಸಲು ವಿಳಂಬವಾಗಿತ್ತು ಎಂದು ಹೇಳಲಾಗಿದೆ.