ಬಲ್ಲಿಯಾ: ಉತ್ತರ ಪ್ರದೇಶದ ಬಲ್ಲಿಯಾದಲ್ಲಿ 12ನೇ ತರಗತಿಯ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ. ಟಿವಿ ನೋಡುತ್ತಿರುವುದಕ್ಕೆ ತಾಯಿ ಗದರಿಸಿದ್ದೇ ಆಕೆಯ ದುಡುಕಿನ ನಿರ್ಧಾರಕ್ಕೆ ಕಾರಣವೆನ್ನಲಾಗಿದೆ.
18 ವರ್ಷದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಭಾನುವಾರ ರಾತ್ರಿ ಕೋಣೆಗೆ ಹೋಗಿ ಒಳಗಿನಿಂದ ಚಿಲಕ ಹಾಕಿದ್ದಾಳೆ. ನಂತರ ದುಪಟ್ಟಾ ತೆಗೆದುಕೊಂಡು ಸೀಲಿಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವಿದ್ಯಾರ್ಥಿನಿಯನ್ನು ಮನಿಷಾ ಎಂದು ಗುರುತಿಸಲಾಗಿದೆ. ಸೋಮವಾರ ಬೆಳಗ್ಗೆ ಕೋಣೆಯಿಂದ ಹೊರಗೆ ಬಾರದೆ ಇದ್ದಾಗ ಮನೆಯವರು ಬಾಗಿಲು ತೆಗೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ಉಭಾನ್ ಪೊಲೀಸ್ ಠಾಣೆ ಎಸ್ಹೆಚ್ಒ ಎಂ.ಕೆ. ಶ್ರೀವಾಸ್ತವ ತಿಳಿಸಿದ್ದಾರೆ.
ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಯುವತಿ ನೇಣು ಬಿಗಿದುಕೊಂಡಿದ್ದ ಕೊಠಡಿಯಿಂದ ಆತ್ಮಹತ್ಯೆ ಪತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆತ್ಮಹತ್ಯೆ ಪತ್ರದಲ್ಲಿ ತನ್ನ ತಾಯಿಯಿಂದ ನಿಂದಿಸಿದ್ದರಿಂದ ತೀವ್ರ ಹೆಜ್ಜೆ ಇಡುತ್ತಿರುವುದಾಗಿ ಬರೆದಿದ್ದಾಳೆ. ಭಾನುವಾರ ತಡರಾತ್ರಿ ಮನೀಶಾ ಟಿವಿ ನೋಡುತ್ತಿದ್ದಳು, ಇದರಿಂದ ಕೋಪಗೊಂಡ ಆಕೆಯ ತಾಯಿ ಆಕೆಯನ್ನು ಗದರಿಸಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.