ಮಂಗಳೂರು: ರಾಜಕೀಯ ಲಾಭಕ್ಕಾಗಿ ಮಹಾರಾಷ್ಟ್ರ ಗಡಿ ವಿವಾದ ತೆಗೆದಿದೆ. ಅನಗತ್ಯ ಹೇಳಿಕೆಗಳ ಮೂಲಕ ಕನ್ನಡಿಗರನ್ನು ಕೆಣಕುತ್ತಿದೆ. ಇದೆಲ್ಲ ನಡೆಯುತ್ತಿರುವುದೇ ಮಹಾರಾಷ್ಟ್ರದಲ್ಲಿ ಪಾಲಿಕೆ ಚುನಾವಣೆಗಾಗಿ ಎಂದು ಮಾಜಿ ಸಚಿವ, ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ. ಖಾದರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಗಡಿ ವಿಚಾರದಲ್ಲಿ ಕರ್ನಾಟಕ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಂಡಿಲ್ಲ. ಡಬಲ್ ಇಂಜಿನ್ ಸರ್ಕಾರ ಇರುವಲ್ಲೇ ಹೀಗಾದರೆ ಹೇಗೆ? ಕೇಂದ್ರ, ಮಹಾರಾಷ್ಟ್ರ, ಕರ್ನಾಟಕದಲ್ಲಿ ಬಿಜೆಪಿಯೇ ಆಡಳಿತದಲ್ಲಿದೆ. ಕೇಂದ್ರ ಸರ್ಕಾರ ಯಾಕೆ ಮಹಾರಾಷ್ಟ್ರಕ್ಕೆ ಎಚ್ಚರಿಕೆ ನೀಡುತ್ತಿಲ್ಲ. ಮಹಾಜನ್ ವರದಿ ಬಗ್ಗೆಯೂ ಕೇಂದ್ರ ಸರ್ಕಾರ ಮೌನವಾಗಿದೆ. ರಾಜಕೀಯ ಲಾಭಕ್ಕಾಗಿ ಎರಡು ರಾಜ್ಯಗಳ ಜನ ಹೊಡೆದಾಡಿ ಸಾಯಬೇಕಾ ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕದ ಮೇಲೆ ದಬ್ಬಾಳಿಕೆ ನಡೆಯುತ್ತಿದ್ದರೂ, ಕೇಂದ್ರ ಸರ್ಕಾರ ಮೌನವಾಗಿದೆ. ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಮಾಡುತ್ತಿರುವ ದ್ರೋಹ ಇದು. ರಾಜ್ಯದ ವಾಹನಗಳ ಮೇಲೆ ದಾಳಿ ಮಾಡಿದವರ ಮೇಲೆ ಕ್ರಮ ಜರುಗಿಸಬೇಕು. ಧಂ, ತಾಕತ್ ಬಗ್ಗೆ ಮಾತನಾಡುವವರು ಈಗ ಯಾಕೆ ಮೌನವಾಗಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಮಹಾರಾಷ್ಟ್ರ ಸರ್ಕಾರಕ್ಕೂ ಇದೇ ಡೈಲಾಗ್ ಹೇಳಲಿ ಎಂದು ಖಾದರ್ ಹೇಳಿದ್ದಾರೆ.