ದೇಶದ ಮಾರುಕಟ್ಟೆಯಲ್ಲಿ ದೊರಕುವ ಆಹಾರದ ಉತ್ಪನ್ನಗಳ ಪೈಕಿ 68%ರಷ್ಟು ಉತ್ಪನ್ನಗಳಲ್ಲಿ ಅಧಿಕ ಪ್ರಮಾಣದಲ್ಲಿ ಸಕ್ಕರೆ, ಉಪ್ಪು ಅಥವಾ ಸಂತೃಪ್ತ ಕೊಬ್ಬಿನ ಪ್ರಮಾಣ ಹೆಚ್ಚಿರುತ್ತದೆ ಎಂದು ಅಧ್ಯಯನವೊಂದರಿಂದ ತಿಳಿದು ಬಂದಿದೆ.
ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ಹಾಗೂ ಉತ್ತರ ಕರೋಲಿನಾ ವಿವಿಯ ಸಂಶೋಧಕರು 10,500ಕ್ಕೂ ಹೆಚ್ಚು ಉತ್ಪನ್ನಗಳ ಅಧ್ಯಯನ ನಡೆಸಿದ್ದಾರೆ. ಈ ಎಲ್ಲಾ ಉತ್ಪನ್ನಗಳ ಮೇಲೂ ಅವುಗಳಲ್ಲಿರುವ ಪೋಷಕಾಂಶಗಳ ವಿವರಗಳನ್ನು ಪೊಟ್ಟಣಗಳ ಮೇಲೆ ನೀಡಲಾಗಿದೆ.
ಇವುಗಳ ಪೈಕಿ ಕೇವಲ 32%ನಷ್ಟು ಉತ್ಪನ್ನಗಳಲ್ಲಿ ಮಾತ್ರವೇ ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿರುವ ವೈಜ್ಞಾನಿಕ ಮಿತಿಗಳ ಒಳಗೆ ಇವೆ ಎಂದು ಕಂಡು ಬಂದಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾದ ಅಂಗ ನಿಗದಿಪಡಿಸಿದ ಪೋಷಕಾಂಶಗಳ ಪ್ರೊಫೈಲ್ ಮಾಡೆಲ್ (ಎನ್‌ಪಿಎಂ) ಭಾರತೀಯ ಸಂಸ್ಕರಿಸಿದ ಆಹಾರ ಮಾರುಕಟ್ಟೆಗೆ ಅನ್ವಯವಾಗುವಂತಿದ್ದು, ಉಪ್ಪು, ಸಕ್ಕರೆ ಹಾಗೂ ಬೊಜ್ಜಿನ ಪ್ರಮಾಣಗಳನ್ನು ಇಳಿಸಲು ವೈಜ್ಞಾನಿಕ ಕ್ರಿಯೆಗಳನ್ನು ಅಳವಡಿಸಿಕೊಳ್ಳಲು ಉತ್ತೇಜಿಸುತ್ತದೆ ಎಂದು ಅಧ್ಯಯನದ ವರದಿ ತಿಳಿಸಿದೆ.
ಆಹಾರ ಹಾಗೂ ಪೇಯಗಳಲ್ಲಿರುವ ಪೋಷಕಾಂಶಗಳ ಪ್ರಮಾಣದ ಆಧಾರದ ಮೇಲೆ ಅವುಗಳ ವರ್ಗೀಕರಣ ಮಾಡುವ ವೈಜ್ಞಾನಿಕ ಕ್ರಿಯೆ ಎನ್‌ಪಿಎಂ ಆಗಿದೆ. ಈ ಮೂಲಕ ಅಧಿಕ ಉಪ್ಪಿನಂಶ, ಸಕ್ಕರೆ ಅಂಶ, ಕೊಬ್ಬಿನಂಶ ಹೆಚ್ಚಾಗಿರುವ ಅನಾರೋಗ್ಯಕರವಾದ ಆಹಾರಗಳನ್ನು ಗುರುತಿಸಲು ಈ ಕ್ರಮ ಅನುಕೂಲ ಮಾಡಿಕೊಡುತ್ತದೆ.