ಸುಂದರವಾದ ಹಾಗೂ ಕಾಂತಿಯುತ ತ್ವಚೆಯನ್ನು ಹೊಂದಬೇಕು ಎಂಬ ಕನಸು ಯಾವ ಮಹಿಳೆಗೆ ಇರೋದಿಲ್ಲ ಹೇಳಿ..? ಸುಂದರ ತ್ವಚೆಯನ್ನು ಹೊಂದಬೇಕು ಅಂತಾ ಮಹಿಳೆಯರು ಸಾಕಷ್ಟು ಬ್ಯೂಟಿ ಟಿಪ್ಸ್ಗಳನ್ನು ಅನುಸರಿಸುತ್ತಾರೆ. ಇನ್ನು ಕೆಲವರು ಬ್ಯೂಟಿ ಪಾರ್ಲರ್ ಹಾಗೂ ಬ್ಯೂಟಿ ಪ್ರಾಡಕ್ಟ್ಗಳ ಮೇಲೆ ಸಾವಿರಾರು ರೂಪಾಯಿಯನ್ನು ವ್ಯಯಿಸುತ್ತಾರೆ. ಆದರೆ ಅನೇಕ ಬಾರಿ ಇವುಗಳು ತ್ವಚೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.
ಮಹಿಳೆಯರಲ್ಲಿ ಸಾಮಾನ್ಯವಾಗಿ ಬ್ಲಾಕ್ಹೆಡ್ಸ್ ಇಲ್ಲವೇ ವೈಟ್ಹೆಡ್ಸ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅದರಲ್ಲೂ ವೈಟ್ಹೆಡ್ ಸಮಸ್ಯೆ 11 ರಿಂದ 25 ವರ್ಷ ಒಳಗಿನವರಲ್ಲಿ ಸರ್ವೇ ಸಾಮಾನ್ಯವಾಗಿ ಕಂಡುಬರುತ್ತದೆ. ಇದಕ್ಕಾಗಿ ನೀವು ಹೆಚ್ಚು ಚಿಂತಿಸಬೇಕಿಲ್ಲ. ಮನೆ ಮದ್ದನ್ನು ಬಳಸಿ ಈ ಸಮಸ್ಯೆಯನ್ನು ಬೇರು ಸಮೇತ ಕಿತ್ತು ಹಾಕಬಹುದಾಗಿದೆ.
ವೈಟ್ಹೆಡ್ ಕೂಡ ಒಂದು ರೀತಿಯಲ್ಲಿ ಮೊಡವೆ ಸಮಸ್ಯೆ ಇದ್ದಂತೆಯೇ. ಇದು ಸಾಮಾನ್ಯವಾಗಿ ಮೂಗು, ಗಲ್ಲ, ಹಣೆ ಹಾಗೂ ಕಿವಿಯ ಬಳಿ ಹೆಚ್ಚಾಗಿ ಕಾಣಿಸಿಕೊಳ್ಳತ್ತದೆ. ಸತ್ತ ಕೋಶಗಳು ಹಾಗೂ ಎಣ್ಣೆ ಚರ್ಮದಿಂದ ಈ ಸಮಸ್ಯೆ ಉಂಟಾಗುತ್ತದೆ. ತ್ವಚೆಗೆ ಉಸಿರಾಡಲು ಸಾಧ್ಯವಾಗದೇ ಇದ್ದಾಗ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಟೊಮ್ಯಾಟೋ : ತ್ವಚೆಯ ಆರೋಗ್ಯಕ್ಕೆ ಟೊಮ್ಯಾಟೋ ಬಳಕೆ ತುಂಬಾನೇ ಒಳ್ಳೆಯದು. ಇದರಲ್ಲಿ ವಿಟಾಮಿನ್ ಸಿ ಅಗಾಧ ಪ್ರಮಾಣದಲ್ಲಿ ಇರುತ್ತದೆ. ಟೋಮ್ಯಾಟೋವನ್ನು ಕತ್ತರಿಸಿ ಮುಖಕ್ಕೆ ತಿಕ್ಕಿ. ಇದಾದ ಮೇಲೆ 5 ನಿಮಿಷ ಬಿಟ್ಟು ಮುಖ ತೊಳೆದುಕೊಳ್ಳಿ.
ಮೊಸರು : ವೈಟ್ಹೆಡ್ ತೆಗೆಯುವಲ್ಲಿ ಮೊಸರು ಕೂಡ ಪ್ರಮುಖ ಪಾತ್ರ ವಹಿಸುತ್ತದೆ. 2 ಚಮಚ ಮೊಸರಿಗೆ 1 ಚಮಚ ಓಟ್ಮೀಲ್ ಹಾಕಿ ಮಿಶ್ರಣ ಮಾಡಿ. ಈ ಫೇಸ್ಪ್ಯಾಕ್ನ್ನು ಹಚ್ಚಿಕೊಂಡು 10 ನಿಮಿಷ ಹಾಗೆ ಬಿಡಿ. ಬಳಿಕ ಸ್ವಲ್ಪ ಮಸಾಜ್ ಮಾಡಿಕೊಂಡು ಮುಖ ತೊಳೆದುಕೊಳ್ಳಿ.
ಮುಲ್ತಾನಿ ಮಿಟ್ಟಿ : ವೈಟ್ಹೆಡ್ನಿಂದ ಪಾರಾಗಲು ನೀವು ಮುಲ್ತಾನಿ ಮಿಟ್ಟಿಯನ್ನೂ ಬಳಕೆ ಮಾಡಬಹುದು. ಬಾದಾಮಿಯನ್ನು ಪುಡಿ ಮಾಡಿ ಇದಕ್ಕೆ ಸ್ವಲ್ಪ ಗ್ಲಿಸರಿನ್ ಹಾಗೂ 1 ಚಮಚ ಮುಲ್ತಾನಿ ಮಿಟ್ಟಿ ಸೇರಿಸಿ. ಇದರಿಂದ ಮುಖವನ್ನು ಸ್ಕ್ರಬ್ ಮಾಡಿ ಬಳಿಕ ತೊಳೆದುಕೊಳ್ಳಿ.