ಮುಂಬೈ: ಧ್ವನಿ ವರ್ಧಕಗಳ ಬಳಕೆ ಯಾವುದೇ ಧರ್ಮದ ಅಗತ್ಯ ಭಾಗವಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದ್ದು, ಧ್ವನಿ ವರ್ಧಕ ಬಳಕೆಗೆ ಅನುಮತಿ ನಿರಾಕರಿಸುವುದು ಮೂಲಭೂತ ಹಕ್ಕುಗಳ ಉಲ್ಲಂಘನೆಗೆ ಸಮನಾಗುವುದಿಲ್ಲ ಎಂದು ಮಹತ್ವದ ತೀರ್ಪು ನೀಡಿದೆ.
ಶಬ್ದ ಮಾಲಿನ್ಯ -ನಿರ್ವಹಣೆ ಮತ್ತು ನಿಯಂತ್ರಣ ನಿಯಮಗಳು- 2000, ಮಹಾರಾಷ್ಟ್ರ ಪೊಲೀಸ್ ಕಾಯ್ದೆ, ಪರಿಸರ ಸಂರಕ್ಷಣೆ ಕಾಯ್ದೆ ನಿಯಮಗಳನ್ನು ಉಲ್ಲಂಘಿಸುವ ಧ್ವನಿವರ್ಧಕಗಳ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಸಂಸ್ಥೆಗಳಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ. ನ್ಯಾಯಮೂರ್ತಿಗಳದ ಅಜಯ್ ಗಡ್ಕರಿ, ಶ್ಯಾಮ್ ಚಾಂಡಕ್ ಅವರಿದ್ದ ವಿಭಾಗೀಯ ಪೀಠ ನೀಡಿರುವ ಈ ಮಹತ್ವದ ತೀರ್ಪು ರಾಷ್ಟ್ರಮಟ್ಟದಲ್ಲಿಯೂ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ.
ಮುಂಬೈನ ಕುರ್ಲಾದ ಜಾಗೊ ನೆಹರು ನಗರ ರೆಸಿಡೆಂಟ್ ವೆಲ್ಫೇರ್ ಅಸೋಸಿಯೇಷನ್, ಶಿವಶಕ್ತಿ ಕೋ ಆಪರೇಟಿವ್ ಸೊಸೈಟಿ ಅಸೋಸಿಯೇಷನ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಗಳ ವಿಚಾರಣೆ ನಡೆಸಿದ ವಿಭಾಗೀಯ ಪೀಠ ಧ್ವನಿವರ್ಧಕ ಧರ್ಮದ ಭಾಗವಲ್ಲ ಎಂದು ಹೇಳಿದೆ.
ಅನೇಕ ಮಸೀದಿ, ಮದರಸಾಗಳು ಶಬ್ದ ಮಾಲಿನ್ಯಕ್ಕೆ ಸಂಬಂಧಿಸಿದ ನಿಯಮ ಉಲ್ಲಂಘಿಸುತ್ತಿದ್ದು, ಇವುಗಳ ವಿರುದ್ಧ ಎಫ್ಐಆರ್ ದಾಖಲಿಸಲು ಅರ್ಜಿದಾರರು ಕೋರಿದ್ದರು. ಮಹಾರಾಷ್ಟ್ರ ಸರ್ಕಾರ, ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಮುಂಬೈ ಪೊಲೀಸರನ್ನು ಪ್ರತಿ ವಾದಿಗಳನ್ನಾಗಿ ಮಾಡಲಾಗಿತ್ತು.
ಚರ್ಚ್ ಆಫ್ ಗಾಡ್ ಇನ್ ಇಂಡಿಯಾ ವರ್ಸಸ್ ಕೆಕೆಆರ್ ಮೆಜೆಸ್ಟಿಕ್ ಕಾಲೋನಿ ವೆಲ್ಫೇರ್ ಅಸೋಸಿಯೇಷನ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿದ ನ್ಯಾಯಪೀಠ, ಬೇರೆಯವರ ಶಾಂತಿಗೆ ಭಂಗ ತರುವ ಮೂಲಕ ಪ್ರಾರ್ಥನೆ ಸಲ್ಲಿಸಬೇಕು ಎಂದು ಯಾವ ಧರ್ಮವೂ ಹೇಳಿಲ್ಲ. ಮತ್ತೊಂದು ಕಡೆ ಜೋರಾದ ಧ್ವನಿಯಲ್ಲಿ ಇಲ್ಲವೇ ಡ್ರಮ್ ಬಾರಿಸುವ ಮೂಲಕ ಪ್ರಾರ್ಥನೆ ಸಲ್ಲಿಸುವಂತೆ ಯಾವ ಧರ್ಮದ ಉಪದೇಶವೂ ಇಲ್ಲ ಎಂದು ಹೇಳಿದೆ.
ಶಬ್ದವು ಕೂಡ ಆರೋಗ್ಯಕ್ಕೆ ಅಪಾಯ ತರುವ ಪ್ರಮುಖ ಅಂಶವಾಗಿದ್ದು, ಯಾವುದೇ ವ್ಯಕ್ತಿಗೆ ಧ್ವನಿವರ್ಧಕ ಬಳಕೆಗೆ ಅನುಮತಿ ನೀಡದಿದ್ದಾಗ ತನ್ನ ಹಕ್ಕುಗಳಿಗೆ ಚ್ಯುತಿ ಬಂದಿದೆ ಎಂದು ಆ ವ್ಯಕ್ತಿ ಹೇಳುವಂತಿಲ್ಲ. ಜನರ ಹಿತ ದೃಷ್ಟಿಯಿಂದ ಧ್ವನಿವರ್ಧಕ ಬಳಕೆಗೆ ಅನುಮತಿ ನೀಡಬಾರದು. ಅನುಮತಿ ನಿರಾಕರಿಸುವುದು ಸಂವಿಧಾನದ 19 ಅಥವಾ 25ನೇ ವಿಧಿಯ ಉಲ್ಲಂಘನೆ ಆಗುವುದಿಲ್ಲ. ಧರ್ಮದ ಹೆಸರಿನಲ್ಲಿ ಅಥವಾ ಬೇರೆ ಚಟುವಟಿಕೆ ಮೂಲಕ ವೃದ್ಧರು, ರೋಗಿಗಳು, ವಿದ್ಯಾರ್ಥಿಗಳು, ಮಕ್ಕಳ ಸುಖನಿದ್ರೆಗೆ ಭಂಗ ತರಲು ಅನುಮತಿ ನೀಡಲಾಗದು ಎಂದು ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.