ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣ ಎಳನೀರಿಗಿದೆ. ದೇಹವನ್ನು ಹೈಡ್ರೇಟ್ ಮಾಡಿ, ಶಕ್ತಿಯನ್ನು ಹೆಚ್ಚಿಸುತ್ತದೆ. ಎಳನೀರು ದೇಹದ ಆರೋಗ್ಯ ವೃದ್ಧಿಸುವ ಜೊತೆಗೆ ಸೌಂದರ್ಯ ವರ್ದಕವಾಗಿಯೂ ಕೆಲಸ ಮಾಡುತ್ತದೆ. ಆಂಟಿಆಕ್ಸಿಡೆಂಟ್, ವಿಟಮಿನ್ ಸಿ, ಮೆಗ್ನೀಸಿಯಮ್, ಮ್ಯಾಂಗನೀಸ್, ಪೊಟ್ಯಾಸಿಯಮ್, ಸೋಡಿಯಂ ಮತ್ತು ಕ್ಯಾಲ್ಸಿಯಂನಂತಹ ಪೋಷಕಾಂಶಗಳು ಎಳನೀರಿನಲ್ಲಿದೆ. ಇದು ಆರೋಗ್ಯದ ಜೊತೆಗೆ ಸೌಂದರ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಹೊಳಪಿನ ಮುಖಕ್ಕಾಗಿ ನಾಲ್ಕರಿಂದ ಐದು ಚಮಚ ಶುದ್ಧ ಎಳನೀರನ್ನು ತೆಗೆದುಕೊಂಡು ಅದಕ್ಕೆ ಅರ್ಧ ಚಮಚ ಶ್ರೀಗಂಧದ ಪುಡಿಯನ್ನು ಬೆರೆಸಿ. ಇದಕ್ಕೆ ನಾಲ್ಕರಿಂದ ಐದು ಹನಿ ರೋಸ್ ವಾಟರ್ ಸೇರಿಸಿ. ಈ ಮಿಶ್ರಣವನ್ನು ಫೇಸ್ ಪ್ಯಾಕ್ ನಂತೆ ಮುಖಕ್ಕೆ ಹಚ್ಚಿ ಇಪ್ಪತ್ತು ನಿಮಿಷಗಳ ನಂತರ ಮುಖವನ್ನು ತೊಳೆಯಿರಿ. ಇದನ್ನು ವಾರದಲ್ಲಿ ಎರಡು-ಮೂರು ಬಾರಿ ಮಾಡಿ.
ಮುಖದ ಕಲೆ ಹೋಗಬೇಕೆನ್ನುವವರು ಶುದ್ಧ ಎಳನೀರನ್ನು ಹತ್ತಿಯಲ್ಲಿ ಅದ್ದಿ ಕಲೆಯಿರುವ ಜಾಗಕ್ಕೆ ಹಚ್ಚಿ. 15 ನಿಮಿಷ ಬಿಟ್ಟು ನಂತ್ರ ಮುಖ ತೊಳೆದುಕೊಳ್ಳಿ. ಇದ್ರಿಂದ ಟ್ಯಾನಿಂಗ್ ಸಮಸ್ಯೆಯೂ ಕಡಿಮೆಯಾಗುತ್ತದೆ.
ಕಣ್ಣಿನ ಕೆಳಗೆ ಕಪ್ಪು ಸರ್ಕಲ್ ಇದ್ದಲ್ಲಿ ಅದಕ್ಕೂ ಎಳನೀರು ಒಳ್ಳೆಯದು. ಎರಡು ಚಮಚ ಶುದ್ಧ ಎಳನೀರನ್ನು, ಬಾದಾಮಿ ಎಣ್ಣೆಯಲ್ಲಿ ಸೇರಿಸಿ ಕಣ್ಣಿನ ಸುತ್ತ ಐದು ನಿಮಿಷ ಮಸಾಜ್ ಮಾಡಿ. ರಾತ್ರಿ ಪೂರ್ತಿ ಬಿಟ್ಟು ಬೆಳಿಗ್ಗೆ ಸ್ವಚ್ಛ ನೀರಿನಲ್ಲಿ ತೊಳೆಯಿರಿ.
ಕೂದಲಿನ ಸೌಂದರ್ಯಕ್ಕೂ ಎಳನೀರು ಸಹಕಾರಿ. ಎಳನೀರನ್ನು ತಲೆಗೆ ಹಚ್ಚಿ ಮಸಾಜ್ ಮಾಡಿ. ಒಂದು ಗಂಟೆ ಬಿಟ್ಟು ತಲೆ ತೊಳೆದುಕೊಳ್ಳಿ. ಇದು ಕೂದಲಿಗೆ ಶಕ್ತಿ ನೀಡುತ್ತದೆ.
ಕೂದಲು ಉದುರುವುದನ್ನು ತಡೆಯಲು 7 ಚಮಚ ಎಳನೀರಿಗೆ ಎರಡು ಚಮಚ ಬಾದಾಮಿ ಎಣ್ಣೆ ಸೇರಿಸಿ ತಲೆಗೆ ಮಸಾಜ್ ಮಾಡಿ. ರಾತ್ರಿ ಇದನ್ನು ಹಚ್ಚಿ,ಬೆಳಿಗ್ಗೆ ತಲೆ ಸ್ನಾನ ಮಾಡಿ. ಇದು ತಲೆ ಹೊಟ್ಟಿನ ಸಮಸ್ಯೆಯನ್ನೂ ಕಡಿಮೆ ಮಾಡುತ್ತದೆ.