ಮಳೆಗಾಲದಲ್ಲಿ ತಲೆಹೊಟ್ಟು ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ಸಮಸ್ಯೆಯಾಗಿದೆ. ತಲೆಹೊಟ್ಟು ಬಂದರೆ ತುರಿಕೆ, ತಲೆ ಬುಡ ಶುಷ್ಕವಾಗುವ ಜೊತೆಗೆ ಕೂದಲು ಉದುರುವುದು, ಮೈ ಮೇಲೆ, ಹಣೆ ಮೇಲೆ ಬಿದ್ದರೆ ಮೊಡವೆ ಏಳುವುದು ಮುಂತಾದ ಸಮಸ್ಯೆ ಕಂಡು ಬರುತ್ತದೆ. ಇದರ ನಿವಾರಣೆಗೆ ಕಹಿ ಬೇವಿನ ಎಲೆ ಅತ್ಯುತ್ತಮ ಮದ್ದಾಗಬಲ್ಲದು.
ಒಂದು ಪಾತ್ರೆಗೆ ನೀರು ಹಾಕಿ ಕುದಿಸಿ, ಕುದಿ ಬರುವಾಗ ಕಹಿ ಬೇವಿನ ಎಲೆ ಹಾಕಿ ನಂತರ ಆರಲು ಬಿಡಿ. ಆ ನೀರನ್ನು ಸೋಸಿ ಅಥವಾ ಕಹಿ ಬೇವಿನ ಎಲೆ ತೆಗೆದು ಬಿಡಿ, ಅದನ್ನು ತಲೆಗೆ ಹಚ್ಚಿ, ಸ್ವಲ್ಪ ಹೊತ್ತು ಬಿಟ್ಟು ತಲೆ ತೊಳೆಯಿರಿ. ಹೀಗೆ ಮಾಡುತ್ತಿದ್ದರೆ ತಲೆ ಹೊಟ್ಟಿನ ಸಮಸ್ಯೆ ಬರುವುದಿಲ್ಲ.
ಕಹಿ ಬೇವಿನಂತೆ ಜೇನು ಕೂಡ ಬ್ಯಾಕ್ಟಿರಿಯಾ, ಶಿಲೀಂಧ್ರಗಳ ವಿರುದ್ಧ ಹೋರಾಡುತ್ತದೆ. ಇವೆರಡನ್ನೂ ಬೆರೆಸಿ ಹಚ್ಚುವುದರಿಂದ ಉತ್ತಮ ಪ್ರಯೋಜನ ಪಡೆಯಬಹುದು. ಒಂದು ಹಿಡಿ ಕಹಿ ಬೇವಿನ ಎಲೆಯನ್ನು ಪೇಸ್ಟ್ ಮಾಡಿ, ಅದರ ಜೊತೆ ಜೇನು ಬೆರೆಸಿ ತಲೆಗೆ ಹಚ್ಚಿ 15-20 ನಿಮಿಷ ಬಿಟ್ಟು ತಲೆ ತೊಳೆಯಿರಿ. ಇದರಿಂದ ಹೊಟ್ಟು ದೂರವಾಗುತ್ತದೆ ಮಾತ್ರವಲ್ಲ ತಲೆ ಕೂದಲು ಹೊಳಪು ಪಡೆಯುತ್ತದೆ.