ಚಳಿಗಾಲದಲ್ಲಿ ಶುಂಠಿ ಸೇವಿಸುವುದು ಒಳ್ಳೆಯದು ಎಂಬುದರಲ್ಲಿ ಸಂಶಯವಿಲ್ಲ. ಚಹಾ ರೂಪದಲ್ಲಿ, ದಾಲ್ ಜೊತೆಯಾಗಿ, ಸಲಾಡ್ ಗೆ ಬೆರೆಸಿ ಶುಂಠಿ ಸೇವಿಸುವುದರಿಂದ ಶೀತ, ಕಫದ ಸಮಸ್ಯೆಗಳು ಹತ್ತಿರವೂ ಸುಳಿಯುವುದಿಲ್ಲ.
ಹಾಗೆಂದು ವಿಪರೀತ ಶುಂಠಿ ಸೇವಿಸಿದರೆ ಉಷ್ಣಕ್ಕೆ ಸಂಬಂಧಿಸಿದ ಕೆಲವು ಲಕ್ಷಣಗಳು ನಿಮ್ಮ ದೇಹದಲ್ಲಿ ಕಂಡು ಬಂದಾವು. ಹಾಗಾಗಿ ನಿತ್ಯ ಒಂದಿಂಚಿನಷ್ಟು ಶುಂಠಿ ಒಂದಿಲ್ಲೊಂದು ರೂಪದಲ್ಲಿ ದೇಹಕ್ಕೆ ಸಿಕ್ಕರೆ ಸಾಕು. ಅದಕ್ಕೂ ಹೆಚ್ಚಿನ ಬಳಕೆ ಒಳ್ಳೆಯದಲ್ಲ.
ಕೆಲವರಿಗೆ ಶುಂಠಿ ಹೆಚ್ಚು ಸೇವಿಸಿದಾಗ ತಲೆ ತಿರುಗುವ ಹಾಗೂ ಸುಸ್ತಾಗುವ ಅನುಭವವಾದೀತು. ಶುಂಠಿ ಹೆಚ್ಚು ಹಸಿವಾಗುವಂತೆ ಅಂದರೆ ಜೀರ್ಣಕ್ರಿಯೆಯನ್ನು ಚುರುಕುಗೊಳಿಸಿ ಹೊಟ್ಟೆಯಲ್ಲಿ ಚಡಪಡಿಕೆಯನ್ನು ಉಂಟು ಮಾಡುತ್ತದೆ.
ಇದನ್ನು ಹೆಚ್ಚು ಸೇವಿಸುವುದರಿಂದ ತಲೆಕೂದಲು ಉದುರುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆ ಕಂಡು ಬರುತ್ತದೆ ಮಾತ್ರವಲ್ಲ ಉಷ್ಣದಿಂದ ಬಾಯಿಹುಣ್ಣು ಕೂಡಾ ಕಾಣಿಸಿಕೊಳ್ಳಬಹುದು. ಹಾಗಾಗಿ ಶುಂಠಿಯನ್ನು ಎಷ್ಟು ಬೇಕೋ ಅಷ್ಟೇ ಬಳಸುವುದೂ ಬಹಳ ಮುಖ್ಯ.