ಅಮೆರಿಕಾದ ಒರೆಗಾನ್ ರಾಜ್ಯದ ಮಹಿಳೆಯೊಬ್ಬರು ವಿಮಾನದಲ್ಲಿ ಕಳೆದುಕೊಂಡಿದ್ದ ಸೂಟ್ ಕೇಸ್ ನ 4 ವರ್ಷದ ನಂತರ ಪಡೆದುಕೊಂಡಿದ್ದಾರೆ. 4 ವರ್ಷದ ಹಿಂದೆ ಚಿಕಾಗೋದಿಂದ ಯುನೈಟೆಡ್ ಏರ್ಲೈನ್ಸ್ ಫ್ಲೈಟ್ನಲ್ಲಿ ಮನೆಗೆ ಹೋಗುವಾಗ ಸೂಟ್ಕೇಸ್ ಕಳೆದುಹೋಗಿತ್ತು. ಇದೀಗ ಮತ್ತೆ ಸೂಟ್ ಕೇಸ್ ಪಡೆದುಕೊಂಡಿರೋದಾಗಿ ಹೇಳಿದ್ದಾರೆ.
ಮಹಿಳೆ ಗೇವಿನ್ ಅವರು ಆಗಸ್ಟ್ 2018 ರಲ್ಲಿ ಚಿಕಾಗೋದಿಂದ ಮನೆಗೆ ಬರುತ್ತಿರುವಾಗ ಲಗೇಜ್ ಹೇಗೆ ಕಳೆದುಹೋಯಿತು ಎಂಬುದನ್ನು ವಿವರಿಸುವ ವೀಡಿಯೊಗಳ ಸರಣಿಯನ್ನು ಟಿಕ್ ಟಾಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಹಲವಾರು ತಿಂಗಳ ಹುಡುಕಾಟದ ನಂತರ ನಾಪತ್ತೆಯಾಗಿರುವ ನಿಮ್ಮ ಸೂಟ್ ಕೇಸ್ ಇದುವರೆಗೂ ಪತ್ತೆಯಾಗದೇ ನಿಗೂಢವಾಗಿದೆ ಎಂದು ವಿಮಾನಯಾನ ಸಂಸ್ಥೆ ಆರಂಭದಲ್ಲಿ ತಿಳಿಸಿತ್ತು. ಕಳೆದುಹೋದ ಕೆಲವು ವಸ್ತುಗಳಿಗೆಂದು ಪರಿಹಾರವನ್ನೂ ನೀಡಲಾಗಿತ್ತು. ಆದರೆ ಈ ವಾರ ತನ್ನ ಸೂಟ್ಕೇಸ್ ಹೂಸ್ಟನ್ನ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದೆ ಎಂದು ತಿಳಿಸುವ ಫೋನ್ ಕರೆಯನ್ನು ಸ್ವೀಕರಿಸಿದಾಗ ಆವರು ಅಚ್ಚರಿ ಪಟ್ಟಿದ್ದಾರೆ. ಸೂಟ್ ಕೇಸ್ ಹೊಂಡುರಾಸ್ನಿಂದ ವಿಮಾನದಲ್ಲಿ ಬಂದಿರುವುದಾಗಿ ಕೇಳಿದ್ದು ಮತ್ತಷ್ಟು ಆಶ್ಚರ್ಯವಾಯಿತು ಎಂದು ಅವರು ಹೇಳಿದರು.
ಗೇವಿನ್ ಬ್ಯಾಗ್ ಸ್ವಲ್ಪ ಹಾನಿಗೊಳಗಾಗಿದೆ ಮತ್ತು ಸವೆದುಹೋಗಿದೆ. ಆದರೆ ಅದರಲ್ಲಿದ್ದ ವಸ್ತುಗಳು ಹಾಗೇ ಇವೆ. ಚಿಕಾಗೋಗೆ ಹಾರುವ ಮೊದಲು ಬ್ಯಾಗ್ ಅನ್ನು ಪರಿಶೀಲಿಸಿದಾಗ ಅದನ್ನು ಸರಿಯಾಗಿ ಸ್ಕ್ಯಾನ್ ಮಾಡಲಾಗಿಲ್ಲ ಎಂದು ಯುನೈಟೆಡ್ ಏರ್ಲೈನ್ಸ್ ತನ್ನ ಬ್ಯಾಗ್ ಅನ್ನು ಪತ್ತೆಹಚ್ಚುವಲ್ಲಿನ ತೊಂದರೆಯನ್ನು ಹೇಳಿದೆ ಎಂದು ಮಹಿಳೆ ತಿಳಿಸಿದ್ದಾರೆ.