ಅಮೆರಿಕದಲ್ಲಿ ತಂಬಾಕು ಸೇವಿಸ್ತಿದ್ದ ವ್ಯಕ್ತಿಯ ನಾಲಗೆಯು ಹಸಿರು ಬಣ್ಣಕ್ಕೆ ತಿರುಗಿರೋ ವಿಲಕ್ಷಣ ವೈದ್ಯಕೀಯ ಪ್ರಕರಣ ವರದಿಯಾಗಿದೆ. ಓಹಿಯೋದಲ್ಲಿರುವ ವ್ಯಕ್ತಿಯು ತನ್ನ ನಾಲಿಗೆಯ ಮೇಲೆ ಹಸಿರು ಬಣ್ಣದ ಕೂದಲುಗಳು ಬೆಳೆಯುತ್ತಿವೆ ಎಂದು ವೈದ್ಯರನ್ನ ಸಂಪರ್ಕಿಸಿದ್ದಾರೆ.
ವ್ಯಕ್ತಿಯ ಸ್ಥಿತಿಯನ್ನು ವಿವರಿಸುವ ಅಧ್ಯಯನವು ʼನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ʼ ನಲ್ಲಿ ಪ್ರಕಟವಾಗಿದೆ. ಪ್ರಸ್ತುತ ತಂಬಾಕು ಸೇವನೆ ಮಾಡುತ್ತಿರುವ ವ್ಯಕ್ತಿಗೆ 64 ವರ್ಷ ವಯಸ್ಸಾಗಿದೆ. ಕಳೆದೆರಡು ವಾರದಿಂದ ನಾಲಗೆ ಮೇಲೆ ಹಸಿರು ಬಣ್ಣದ ಕೂದಲು ಬೆಳೆಯುತ್ತಿದ್ದು, ಆತ ಸದ್ಯ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ಚರ್ಮದ ಕೋಶಗಳ ಅಸಹಜ ಕೋಟಿಂಗ್ ನಿಂದಾಗಿ ನಾಲಗೆ ಮೇಲೆ ಕೂದಲುಗಳು ಬೆಳೆದಿವೆ ಎಂದು ವೈದ್ಯರು ತಮ್ಮ ರೋಗನಿರ್ಣಯದಲ್ಲಿ ಹೇಳಿದ್ದಾರೆ.
ಅಮೆರಿಕನ್ ಅಕಾಡೆಮಿ ಆಫ್ ಓರಲ್ ಮೆಡಿಸಿನ್ ಪ್ರಕಾರ “ಮೌತ್‌ವಾಶ್‌ಗಳು ಅಥವಾ ಕ್ಯಾಂಡಿಯಂತಹ ಇತರ ಅಂಶಗಳ ಆಧಾರದ ಮೇಲೆ ಕೂದಲುಳ್ಳ ನಾಲಿಗೆ ಕಂದು, ಬಿಳಿ, ಹಸಿರು ಅಥವಾ ಗುಲಾಬಿಯಾಗಿ ಕಾಣಿಸಬಹುದು.” ಎಂದು ಹೇಳಿದೆ.
ನಾಲಿಗೆಯನ್ನು ನಿಯಮಿತವಾಗಿ ಕ್ಲೀನ್ ಮಾಡದಿದ್ದರೆ ಕೂದಲಿನಂತಹ ಲೇಪನವು ಸುಮಾರು ಒಂದು ಇಂಚಿನವರೆಗೆ ಬೆಳೆಯುತ್ತದೆ ಎಂದು ತಜ್ಞರು ಹೇಳಿದ್ದಾರೆ.
ಇದು ಬ್ಯಾಕ್ಟೀರಿಯಾ, ಆಹಾರ ಮತ್ತು ಯೀಸ್ಟ್ ನಂತಹ ಇತರ ವಸ್ತುಗಳಿಂದಲೂ ಸಂಭವಿಸಬಹುದೆಂದು ಹೇಳಲಾಗಿದೆ. ಆದರೆ ವ್ಯಕ್ತಿ ಎಷ್ಟು ಸಮಯದಿಂದ ತಂಬಾಕು ಉತ್ಪನ್ನಗಳನ್ನು ಬಳಸುತ್ತಿದ್ದಾರೆಂದು ವೈದ್ಯರು ಬಹಿರಂಗಪಡಿಸಲಿಲ್ಲ.