ಭಾರತೀಯರು ತಾವು ವಿದೇಶದಲ್ಲಿ ವಾಸಿಸುತ್ತಿದ್ದರೆ, ಭಾರತೀಯ ಶೈಲಿಯ ಖಾದ್ಯಗಳನ್ನು ಬಹಳ ಇಷ್ಟಪಡುತ್ತಾರೆ. ಭಾರತೀಯ ಮೂಲದ ರೆಸ್ಟೋರೆಂಟ್ ಗಳಿಗೆ ಭೇಟಿ ನೀಡಿ, ತಮಗಿಷ್ಟವಾದ ಖಾದ್ಯ ಮೆಲ್ಲುತ್ತಾರೆ.
ಇದೀಗ ಇಂಡಿಯನ್ ಕ್ರೆಪ್ ಕಂ ಎಂದು ಕರೆಯಲ್ಪಡುವ ಅಮೆರಿಕಾದ ರೆಸ್ಟೋರೆಂಟ್ ವೊಂದು ದಕ್ಷಿಣ ಭಾರತೀಯ ಶೈಲಿಯ ಭಕ್ಷ್ಯಗಳನ್ನು ಒದಗಿಸುತ್ತಿದೆ. ಡಂಕ್ಡ್ ಡೋನಟ್ ಡಿಲೈಟ್, ಡಂಕ್ಡ್ ರೈಸ್ ಕೇಕ್ ಡಿಲೈಟ್, ನೇಕೆಡ್ ಕ್ರೆಪ್ ಮತ್ತು ಸ್ಮ್ಯಾಶ್ಡ್ ಪೊಟಾಟೋ ಕ್ರೆಪ್ ನಂತಹ ಉಪಾಹಾರ ಖಾದ್ಯಗಳನ್ನು ಒದಗಿಸುತ್ತದೆ. ಅಯ್ಯೋ ಇದೇನಿದು..? ಇದ್ಯಾವ ನಮ್ಮ ದಕ್ಷಿಣ ಭಾರತೀಯ ಶೈಲಿಯ ಖಾದ್ಯ ಅಂತಾ ಅಚ್ಚರಿಪಡುತ್ತಿದ್ದೀರಾ..? ಮೆದು ವಡೆ, ಸಾಂಬಾರ್ ಇಡ್ಲಿ, ಸಾದಾ ದೋಸೆ ಮತ್ತು ಮಸಾಲೆ ದೋಸೆಯನ್ನೇ ಈ ರೀತಿ ಹೆಸರಿಡಲಾಗಿದೆ.
ಖಾದ್ಯಗಳ ಹೆಸರು ಕೇಳಿದ್ರೆ ಬಹುಶಃ ನಿಮಗೆ ನಗು ಬರಬಹುದು. ಆದರೆ, ಈ ರೆಸ್ಟೋರೆಂಟ್ ಉಪಾಹಾರವನ್ನು ಮಾರಾಟ ಮಾಡುತ್ತಿರುವ ಬೆಲೆ ಕೇಳಿದ್ರೆ ಮಾತ್ರ ಶಾಕ್ ಆಗ್ತೀರಾ..! ಹೌದು, ಸ್ಮಾಶ್ಡ್ ಪೊಟಾಟೊ ಕ್ರೇಪ್ ಡಾಲರ್ 18.69 (ರೂ. 1,491), ನೇಕೆಡ್ ಕ್ರೇಪ್ ಡಾಲರ್ 17.59 (ರೂ. 1,404), ಡಂಕ್ಡ್ ಡೋನಟ್ ಡಿಲೈಟ್ ಡಾಲರ್ 16.49 (ರೂ. 1,316) ದರಕ್ಕೆ ಮಾರಾಟ ಮಾಡಲಾಗುತ್ತದೆ. ಈ ಬೆಲೆ ನೆಟ್ಟಿಗರನ್ನು ಸಂತೋಷಪಡಿಸಿದಂತೆ ಕಂಡಿಲ್ಲ. ದೋಸೆ, ಇಡ್ಲಿ-ಸಾಂಬಾರ್ ಗೆ ದುಬಾರಿ ಮೊತ್ತ ವಿಧಿಸಿರುವುದು ಹಲವರಿಗೆ ಅಸಮಾಧಾನ ತಂದಿದೆ.