ವಾಷಿಂಗ್ಟನ್ ಡಿಸಿ: ಅಮೆರಿಕದ ಎಲ್ಲಾ ನಾಗರಿಕರಿಗೆ ಕೊರೋನಾ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು ಎಂದು ನಿಯೋಜಿತ ಅಧ್ಯಕ್ಷ ಜೋ ಬೈಡೆನ್ ಭರವಸೆ ನೀಡಿದ್ದಾರೆ.
ಕೊರೋನಾ ಲಸಿಕೆ ಸಿದ್ಧವಾದ ನಂತರ ಮತ್ತು ಅಂಗೀಕರಿಸಲ್ಪಟ್ಟ ನಂತರ ದೇಶದ ಎಲ್ಲಾ ನಾಗರಿಕರಿಗೆ ಉಚಿತವಾಗಿ ಲಸಿಕೆ ನೀಡಲಾಗುವುದು. ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರೊಂದಿಗೆ ಎಲ್ಲರಿಗೂ ಲಸಿಕೆ ಪರಿಣಾಮಕಾರಿಯಾಗಿ ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ್ತು ನಂತರದಲ್ಲಿ ಕೊರೋನಾ ಲಸಿಕೆ ಅಭಿವೃದ್ಧಿ, ಉತ್ಪಾದನೆ, ವಿತರಣೆ ಬಗ್ಗೆ ತನ್ನದೇ ಆದ ಕಾರ್ಯತಂತ್ರ ರೂಪಿಸಿರುವ ಜೋ ಬೈಡೆನ್ ಈಗ ಉಚಿತವಾಗಿ ಲಸಿಕೆ ನೀಡುವ ಭರವಸೆ ನೀಡಿದ್ದಾರೆ.
ಇನ್ನು ಅಮೆರಿಕದಲ್ಲಿ ಒಂದೇ ದಿನ ಬರೋಬ್ಬರಿ 2.1 ಲಕ್ಷ ಜನರಿಗೆ ಸೋಂಕು ತಗುಲಿದೆ. ಕೊರೋನಾ ಕಾಣಿಸಿಕೊಂಡ ನಂತರ ಒಂದೇ ದಿನದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಸೋಂಕಿತರು ಪತ್ತೆಯಾಗಿರುವುದು ಹೊಸ ದಾಖಲೆಯಾಗಿದೆ.