ರಷ್ಯಾ ಹಾಗೂ ಉಕ್ರೇನ್ ನ ಗಡಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಉಕ್ರೇನ್ ನಲ್ಲಿನ ಅಧಿಕಾರಿಗಳಿಗೆ ದೇಶಕ್ಕೆ ಮರಳಿ ಬರುವಂತೆ ಅಮೆರಿಕವು ಹೇಳಿದೆ ಎನ್ನಲಾಗಿದೆ.
ಅಮೆರಿಕವು ಸದ್ಯ ಉಕ್ರೇನ್ ನಲ್ಲಿನ ತನ್ನ ರಾಯಭಾರ ಕಚೇರಿಯಲ್ಲಿನ ಎಲ್ಲ ಸಿಬ್ಬಂದಿಗೆ ಹಾಗೂ ಕುಟುಂಬಗಳು ಮರಳಿ ದೇಶಕ್ಕೆ ಬರುವಂತೆ ಸೂಚಿಸಿದೆ. ಉಕ್ರೇನ್ ನ ಕೈವ್ ನಲ್ಲಿ ಅಮೆರಿಕ ರಾಯಭಾರಿ ಕಚೇರಿ ಇದೆ. ಸದ್ಯ ಅವರಿಗೆಲ್ಲ ಅಮೆರಿಕ ನಿರ್ದೇಶನ ನೀಡಿದೆ.
ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡುವ ಸಾಧ್ಯತೆ ಹೆಚ್ಚಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಗಡಿಯಲ್ಲಿ ರಷ್ಯಾದ ಮಿಲಿಟರಿ ಸಿಬ್ಬಂದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ. ಹೀಗಾಗಿ ಗಡಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ರಷ್ಯಾ ರಾಷ್ಟ್ರವು ಉಕ್ರೇನ್ ವಿರುದ್ಧ ಮಿಲಿಟರಿ ಕ್ರಮ ಜರುಗಿಸಲು ಸಿದ್ಧತೆ ನಡೆಸುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದ ಹಿನ್ನೆಲೆಯಲ್ಲಿ ಅಮೆರಿಕ ಕೂಡ ಈ ನಿರ್ಧಾರ ಕೈಗೊಂಡಿದೆ.
ಇತ್ತೀಚೆಗಷ್ಟೇ ರಷ್ಯಾದ ವಿದೇಶಾಂಗ ಸಚಿವ ಸರ್ಗೆಯ್ ಲಾವ್ರೋವ್ ಹಾಗೂ ಉಕ್ರೇನ್ ನ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ನಡುವೆ ಮಾತುಕತೆ ನಡೆದಿದ್ದು, ಅಲ್ಲಿ ಒಮ್ಮತದ ನಿರ್ಧಾರ ಹೊರ ಬಂದಿಲ್ಲ ಎನ್ನಲಾಗಿದೆ. ಹೀಗಾಗಿಯೇ ಯುದ್ಧ ಭೀತಿ ಆವರಿಸಿದೆ. ಆದರೆ, ಉಕ್ರೇನ್ ಎಂಬ ಪುಟ್ಟ ರಾಷ್ಟ್ರವನ್ನು ರಷ್ಯಾ ಅಲುಗಾಡಿಸಲು ಮುಂದಾದರೆ, ಮೂರನೇ ಮಹಾಯುದ್ಧದ ಭೀತಿಯೂ ಎದುರಾಗುತ್ತಿದೆ.