ಸ್ವಂತ ಮಗನನ್ನ ಕಾರ್ ಡಿಕ್ಕಿಯೊಳಗೆ ಕೂಡಿಹಾಕಿದ ಆರೋಪದ ಮೇಲೆ ಶಿಕ್ಷಕಿಯೋರ್ವಳನ್ನ ಬಂಧಿಸಲಾಗಿದೆ. ಅಮೆರಿಕಾದ ಟೆಕ್ಸಾಸ್ ನಲ್ಲಿ ಈ ಘಟನೆ ನಡೆದಿದ್ದು, ಕೋವಿಡ್ ಸೋಂಕಿತ ಮಗನಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು, ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ತಾಯಿ ಮಗನನ್ನೆ ಅಪಾಯಕ್ಕೆ ಒಳಪಡಿಸಿದ್ದಳು ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.
ಜನವರಿ 3ರಂದು, 41 ವರ್ಷದ ಸಾರಾ ಬೀಮ್ ಹ್ಯಾರಿಸ್ ಕೌಂಟಿಯ ಡ್ರೈವ್-ಥ್ರೂ ಟೆಸ್ಟಿಂಗ್ ಸೈಟ್‌ಗೆ ಬಂದಿದ್ದಾಗ, ಈ ಘಟನೆ ಬೆಳಕಿಗೆ ಬಂದಿದೆ. ಘಟನೆಯ ಪ್ರತ್ಯಕ್ಷದರ್ಶಿ ಕಾರ್ ಟ್ರಂಕ್(ಡಿಕ್ಕಿ)ನಿಂದ ಬರುವ ಧ್ವನಿಗಳನ್ನು ಕೇಳಿಸಿಕೊಂಡಿದ್ದರು. ಅನುಮಾನದಿಂದ ಈ ಬಗ್ಗೆ ಬಂಧಿತೆಯನ್ನ ವಿಚಾರಿಸಿ, ಡಿಕ್ಕಿ ಡೋರ್ ಓಪನ್ ಮಾಡಿ ಎಂದಾಗ ಮೊದಲು ಹಿಂಜರಿದರೂ ಆನಂತರ ಡಿಕ್ಕಿ ತೆಗೆದಾಗ ಒಳಗಡೆ ಹುಡುಗನೊಬ್ಬ ಹೆದರುತ್ತಾ ಮಲಗಿರುವುದನ್ನ ಪ್ರತ್ಯಕ್ಷದರ್ಶಿ ಕಂಡಿದ್ದಾರೆ.
ಬಂಧಿತೆ ಸಾರಾ ಈ ಮೊದಲು ಕೊರೋನಾ ಸೋಂಕಿಗೆ ತುತ್ತಾಗಿದ್ದರು, ಮತ್ತೆ ತಮ್ಮ ಮಗನಿಂದ ಸೋಂಕು ತಗುಲಬಹುದು ಎಂದು ಭಾವಿಸಿ ಆತನನ್ನ ಕಾರ್ ಡಿಕ್ಕಿಯೊಳಗೆ ಲಾಕ್ ಮಾಡಿ, ಆತನಿಗೆ ಸೋಂಕು ಇದೆಯೊ ಇಲ್ಲವೊ ಎಂದು ಪರೀಕ್ಷಿಸಲು ಟೆಸ್ಟಿಂಗ್ ಸೈಟ್ ಗೆ ಬಂದಿದ್ದಳು. ಆದರೆ ಅಲ್ಲಿನ ಆರೋಗ್ಯ ಕಾರ್ಯಕರ್ತರು ಮಗುವನ್ನ ಕಾರಿನ ಹಿಂದಿನ ಸೀಟ್ ನಲ್ಲಿ ಕೂರಿಸಿಕೊಳ್ಳುವವರೆಗೂ ಪರೀಕ್ಷೆ ಮಾಡುವುದಿಲ್ಲ ಎಂದಿದ್ದರು ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ಇಷ್ಟಕ್ಕೆ ಮುಗಿದಿದ್ದರೆ ಇಂದು ಸಾರಾ ಬಂಧನವಾಗುತ್ತಿರಲಿಲ್ಲ, ಆಕೆಯ ವಿರುದ್ಧ ಆಕೆ ಮಾಡಿದ ತಪ್ಪಿಗೆ ಟೆಸ್ಟ್ ಸೈಟ್ ನಲ್ಲಿದ್ದವರೊಬ್ಬರು ಪೊಲೀಸ್ ಗೆ ಘಟನೆಯ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿ ಸಾರಾಳನ್ನ ಬಂಧಿಸಿದ್ದಾರೆ. ಅದೃಷ್ಟವಶಾತ್ ಮಗುವಿಗೆ ಯಾವುದೇ ಹಾನಿಯಾಗಿಲ್ಲ ಎಂದು ಪೊಲೀಸ್ ಹೇಳಿಕೆ ಪ್ರಕಟಿಸಿದೆ.