ಬ್ಯಾಂಕ್ ಖಾತೆಯಿಂದ ವಂಚನೆ ಮಾಡಿ ನಮ್ಮ ಹಣವನ್ನು ಪೀಕುವವರ ಸಂಖ್ಯೆಗೇನು ಈಗ ಬರಗಾಲವಿಲ್ಲ. ಇಂತಹ ಜನರ ನಡುವೆ ವ್ಯಕ್ತಿಯೊಬ್ಬ ಖಾತೆಗೆ ಅಪರಿಚಿತರಿಂದ ಕೋಟ್ಯಂತರ ರೂಪಾಯಿ ಜಮೆಯಾದ ಘಟನೆಯೊಂದು ವರದಿಯಾಗಿದೆ.
ತನ್ನ ಬ್ಯಾಂಕ್ ಖಾತೆಗೆ ಅಪರಿಚಿತ ಮೂಲದಿಂದ ಹಣ ಬಂದಿರುವುದು ಗಮನಕ್ಕೆ ಬಂದ ಬಳಿಕ ಬ್ಯಾಂಕ್ಗೆ ತೆರಳಿದ ವ್ಯಕ್ತಿಯು ತನ್ನ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲನೆ ಮಾಡಿದ ಸಂದರ್ಭದಲ್ಲಿ ಈತನ ಬ್ಯಾಂಕ್ ಖಾತೆಯಲ್ಲಿರುವ ಹಣವು ವರ್ಜಿನ್ ಗ್ರೂಪ್ ಮಾಲೀಕ ರಿಚರ್ಡ್ ಬ್ರಾನ್ಸನ್ಗಿಂತಲೂ 10 ಪಟ್ಟು ಹೆಚ್ಚು ಶ್ರೀಮಂತನನ್ನಾಗಿಸಿದೆ.
ಇಂತಹದ್ದೊಂದು ವಿಲಕ್ಷಣ ಘಟನೆಯು ಲೂಸಿಯಾನಾದಲ್ಲಿ ನಡೆದಿದೆ. ತನ್ನ ಖಾತೆಗೆ 50 ಬಿಲಿಯನ್ ಡಾಲರ್ ಜಮೆಯಾದ ಬಗ್ಗೆ ಮಾಹಿತಿ ಪಡೆದ ಬಳಿಕ ಇಬ್ಬರು ಮಕ್ಕಳ ತಂದೆ ಶಾಕ್ ಆಗಿದ್ದಾರೆ.
ಬ್ಯಾಂಕ್ನಿಂದ ಬಂದಿರುವ ಈ ಸಂದೇಶ ಸರಿಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಕೂಡಲೇ ಬ್ಯಾಂಕ್ಗೆ ಭೇಟಿ ನೀಡಿದ್ದಾರೆ.
ಈ ಹಿಂದೆ ಲೂಸಿಯಾನಾದಲ್ಲಿ ಸಾರ್ವಜನಿಕ ಸುರಕ್ಷತಾ ಇಲಾಖೆಯಲ್ಲಿ ಕಾನೂನು ಜಾರಿ ಅಧಿಕಾರಿಯಾಗಿದ್ದ ಈ ವ್ಯಕ್ತಿಯು ತಾನು ಇಷ್ಟು ದೊಡ್ಡ ಮೊತ್ತದ ಹಣವನ್ನು ಹಿಂದೆಂದೂ ಸಂಪಾದಿಸಿಲ್ಲ ಎಂದು ಬ್ಯಾಂಕ್ಗೆ ಮಾಹಿತಿ ನೀಡಿದ್ದಾರೆ. ಇದಾದ ಬಳಿಕ ಮೂರು ದಿನಗಳ ಕಾಲ ಇವರ ಬ್ಯಾಂಕ್ ಖಾತೆಯನ್ನು ಜಪ್ತಿ ಮಾಡಲಾಗಿತ್ತು.
ಮೂರು ದಿನಗಳ ಬಳಿಕ ಹಣವನ್ನು ಹಿಂಪಡೆಯಲಾಗಿದೆ. ಆದರೆ ಕೆಲವು ನಿಮಿಷಗಳ ಕಾಲ ಡ್ಯಾರೆನ್ ವಿಶ್ವದ 25ನೇ ಶ್ರೀಮಂತ ಎಂಬ ಖ್ಯಾತಿ ಗಳಿಸಿದ್ದಾರೆ.