ಜಾರ್ಜಿಯಾ, ಯುಎಸ್ಎ: ಜಾರ್ಜಿಯಾದ ಸಿಲ್ವೆಸ್ಟರ್ ಫ್ರಾಂಕ್ಲಿನ್ ಎಂಬ 68 ವರ್ಷದ ವ್ಯಕ್ತಿ ಆಲಿಎಕ್ಸ್‌ಪ್ರೆಸ್‌ನಿಂದ ಡ್ರಿಲ್ ಆರ್ಡರ್ ಮಾಡಿ ಕೇವಲ ಅದರ ಮುದ್ರಿತ ಫೋಟೋವನ್ನು ಪಡೆದು ಆಘಾತಕ್ಕೊಳಗಾಗಿದ್ದಾರೆ. ಫ್ರಾಂಕ್ಲಿನ್ ನವೆಂಬರ್‌ನಲ್ಲಿ $40 ಕ್ಕೆ ಡ್ರಿಲ್ ಮತ್ತು ಪ್ರೆಷರ್ ವಾಷರ್ ಅನ್ನು ಖರೀದಿಸಲು ಮುಂದಾಗಿದ್ದರು.
ಪ್ಯಾಕೇಜ್ ಡಿಸೆಂಬರ್‌ನಲ್ಲಿ ಬಂದಾಗ, ಫ್ರಾಂಕ್ಲಿನ್ ಡ್ರಿಲ್ ಬದಲಿಗೆ ಅದರ ಮಡಿಸಿದ ಚಿತ್ರ ಮತ್ತು ಒಂದು ಸ್ಕ್ರೂ ನೋಡಿದ್ದಾರೆ “ನಾನು ಸುಮಾರು 40 ಡಾಲರ್ ಪಾವತಿಸಿದ್ದೆ. ನನಗೆ ಡ್ರಿಲ್‌ನ ಚಿತ್ರ ಮತ್ತು ಒಂದು ಸ್ಕ್ರೂ ಮಾತ್ರ ಸಿಕ್ಕಿದೆ. ನಾನು ತಕ್ಷಣವೇ ಮರುಪಾವತಿಗಾಗಿ ಅವರನ್ನು ಸಂಪರ್ಕಿಸಿದೆ” ಎಂದು ಫ್ರಾಂಕ್ಲಿನ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಆಲಿಎಕ್ಸ್‌ಪ್ರೆಸ್ ಅನ್ನು ಸಂಪರ್ಕಿಸಿದರೂ, ಫ್ರಾಂಕ್ಲಿನ್ ಮರುಪಾವತಿಯನ್ನು ಪಡೆಯಲು ಸಾಧ್ಯವಾಗಿಲ್ಲ. ಹೀಗಾಗಿ ಆನ್‌ಲೈನ್ ಮಾರಾಟಗಾರರು ನ್ಯಾಯಯುತವಾಗಿ ವರ್ತಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಈ ವಿಚಿತ್ರ ಘಟನೆ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದ್ದಂತೆ, ನೆಟಿಜನ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ.
ಒಬ್ಬ ಬಳಕೆದಾರ ವ್ಯಂಗ್ಯವಾಗಿ, “ಕನಿಷ್ಠ ಅವರು ಸ್ಕ್ರೂವನ್ನಾದರೂ ಕಳುಹಿಸಿದ್ದಾರೆ – ಬಹುಶಃ ಅವರು ಡ್ರಿಲ್ ಅನ್ನು ನೀವೇ ನಿರ್ಮಿಸಿಕೊಳ್ಳಬೇಕೆಂದು ನಿರೀಕ್ಷಿಸುತ್ತಾರೆ” ಎಂದು ಕಾಮೆಂಟ್ ಮಾಡಿದ್ದಾರೆ.
ಮತ್ತೊಬ್ಬರು, “ಅಲಿಎಕ್ಸ್‌ಪ್ರೆಸ್ ಹೀಗಿರಬಹುದು: ‘ಇನ್ನೇನು ಬೇಕು ? ನಾವು ಪೂರ್ಣ ಡ್ರಿಲ್ ಅನ್ನು ಕಳುಹಿಸಿದ್ದೇವೆ …… 2D ಯಲ್ಲಿ.’” ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.
ಇನ್ನು ಕೆಲವರು ಫ್ರಾಂಕ್ಲಿನ್‌ಗೆ ಸಹಾನುಭೂತಿ ವ್ಯಕ್ತಪಡಿಸಿ “ಈ ರೀತಿಯ ಆನ್‌ಲೈನ್ ಮಾರುಕಟ್ಟೆಗಳಿಂದ ನಾನು ಎಂದಿಗೂ ಖರೀದಿಸುವುದಿಲ್ಲ. ಇದರಿಂದ ಪಾಠ ಕಲಿತೆ” ಎಂದು ಬರೆದಿದ್ದಾರೆ.
ಮತ್ತೊಬ್ಬ ಬಳಕೆದಾರರು ತಮ್ಮ ಸ್ವಂತ ಅನುಭವವನ್ನು ಹಂಚಿಕೊಂಡಿದ್ದು “ನನಗೂ ಒಮ್ಮೆ ಹೀಗೇ ಆಗಿತ್ತು, ಆದರೆ ನಾನು ಕೈಚೀಲದ ಚಿತ್ರವನ್ನು ಪಡೆದುಕೊಂಡೆ. ಮಾರಾಟಗಾರರು ಜವಾಬ್ದಾರರಾಗಿರಬೇಕು.” ಎಂದು ಹೇಳಿದ್ದಾರೆ.
ಏತನ್ಮಧ್ಯೆ, ಒಬ್ಬ ಬಳಕೆದಾರರು ತಮಾಷೆ ಮಾಡಿದ್ದು “ಬಹುಶಃ ಅವರು ಹಣದ ಚಿತ್ರವನ್ನು ಮುದ್ರಿಸಿದರೆ, ಅವರಿಗೆ ಮರುಪಾವತಿ ಸಿಗಬಹುದೇನೋ?” ಎಂದಿದ್ದಾರೆ.