
ಅಮೆರಿಕಾದ ವಾಷಿಂಗ್ಟನ್ ನ ಹೊರಗೆ ಸುಮಾರು 25 ಮೈಲುಗಳಷ್ಟು (ಸುಮಾರು 40 ಕಿಲೋಮೀಟರ್) ದೂರದ ಪಟ್ಟಣವಾದ ಪೂಲ್ಸ್ವಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಸರ್ಪಗಳ ಹಾವಳಿಯಿಂದ ರೋಸಿ ಹೋದ ಮನೆ ಮಾಲೀಕ, ಅದನ್ನು ಹೇಗಾದರೂ ಓಡಿಸಬೇಕು ಅಂತಾ ಮಾಡಿರೋ ಪ್ಲಾನ್ ಉಲ್ಟಾ ಹೊಡೆದಿದೆ.
ಹೊಗೆ ಹಾಕಿದ್ರೆ ತನ್ನ ಬಂಗ್ಲೆಯಿಂದ ಹಾವುಗಳು ಓಡಿಹೋಗಬಹುದು ಅಂತಾ ಈ ನಿರ್ಧಾರ ಮಾಡಿದ್ದಾನೆ. ಹೀಗಾಗಿ ತನ್ನ ಬಂಗ್ಲೆಗೆ ಬೆಂಕಿಯಿಟ್ಟಿದ್ದಾನೆ. ಅಗ್ನಿ ಧಗಧಗನೇ ಹೊತ್ತಿ ಉರಿದಿದ್ದು, ಇಡೀ ಬಂಗ್ಲೆಯನ್ನೇ ಆವರಿಸಿ ಸುಟ್ಟು ಹೋಗಿದೆ.
ನವೆಂಬರ್ 23 ರಂದು ರಾತ್ರಿ 10 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೆಲಮಾಳಿಗೆಯಲ್ಲಿ ಬೆಂಕಿ ಹೊತ್ತಿ ಉರಿಯಲಾರಂಭಿಸಿದ್ದು, 75 ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಶ್ರಮಿಸಿದ್ದಾರೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ, ಆದರೆ ಹಾವುಗಳ ಸ್ಥಿತಿ ಬಗ್ಗೆ ಇನ್ನೂ ಮಾಹಿತಿ ತಿಳಿದು ಬಂದಿಲ್ಲ.