ಅಫ್ಘಾನಿಸ್ತಾನದಲ್ಲಿ ಸಿಐಎ ಡ್ರೋನ್ ದಾಳಿಯಲ್ಲಿ ಅಲ್ ಖೈದಾ ನಾಯಕ ಅಯ್ಮನ್ ಅಲ್-ಜವಾಹಿರಿ ಸಾವನ್ನಪ್ಪಿದ್ದಾನೆ.
ಟ್ವಿಟರ್ನಲ್ಲಿ ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಅವರು ಸ್ಟ್ರೈಕ್ ನಡೆದಿರುವುದನ್ನು ದೃಢಪಡಿಸಿದ್ದಾರೆ. ಜುಲೈ 31 ರಂದು ಕಾಬೂಲ್ ನಗರದ ಶೆರ್ಪುರ್ ಪ್ರದೇಶದ ವಸತಿ ಗೃಹದ ಮೇಲೆ ವಾಯುದಾಳಿ ನಡೆಸಲಾಯಿತು ಎಂದು ಹೇಳಿದ್ದಾರೆ.
ಅಫ್ಘಾನಿಸ್ತಾನದ ಇಸ್ಲಾಮಿಕ್ ಎಮಿರೇಟ್ ಈ ದಾಳಿಯನ್ನು ಬಲವಾಗಿ ಖಂಡಿಸುತ್ತದೆ. ಇದು ಅಂತರರಾಷ್ಟ್ರೀಯ ತತ್ವಗಳು ಮತ್ತು ದೋಹಾ ಒಪ್ಪಂದದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಮುಜಾಹಿದ್ ಹೇಳಿದರು.
ಅಧ್ಯಕ್ಷ ಜೋ ಬಿಡೆನ್ ಸೋಮವಾರ ಈ ಬಗ್ಗೆ ಘೋಷಿಸಿದ್ದು, ವಿಶ್ವದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬರಾಗಿದ್ದ ಮತ್ತು ಸೆಪ್ಟೆಂಬರ್ 11, 2001 ರ ದಾಳಿಯ ಶಂಕಿತ ಮಾಸ್ಟರ್ ಮೈಂಡ್ ಆಗಿದ್ದ ಅಲ್-ಖೈದಾ ಮುಖ್ಯಸ್ಥ ಅಯ್ಮನ್ ಅಲ್-ಜವಾಹಿರಿಯನ್ನು ಯುನೈಟೆಡ್ ಸ್ಟೇಟ್ಸ್ ಕೊಂದಿದೆ ಎಂದು ಹೇಳಿದ್ದಾರೆ.
ದೂರದರ್ಶನದ ಭಾಷಣದಲ್ಲಿ ಬಿಡೆನ್ ಅವರು, ಅಫ್ಘಾನಿಸ್ತಾನದ ಕಾಬೂಲ್ನಲ್ಲಿ ಶನಿವಾರ ಸ್ಟ್ರೈಕ್ ನಡೆಸಲಾಯಿತು. ಯಾವುದೇ ನಾಗರಿಕ ಸಾವುನೋವುಗಳು ಸಂಭವಿಸಿಲ್ಲ. ಭಯೋತ್ಪಾದಕ ನಾಯಕ ಇನ್ನಿಲ್ಲ ಎಂದು ಹೇಳಿದರು.
ಅಲ್ ಖೈದಾ ನಾಯಕ ಅಯ್ಮಾನ್ ಅಲ್-ಜವಾಹಿರಿ ಹತ್ಯೆಯ ಕುರಿತು ಯುಎಸ್ ಅಧ್ಯಕ್ಷ ಜೋ ಬಿಡೆನ್ ಅವರ ಘೋಷಣೆಯನ್ನು ಸೌದಿ ಅರೇಬಿಯಾ ಸ್ವಾಗತಿಸಿದೆ ಎಂದು ವಿದೇಶಾಂಗ ಸಚಿವಾಲಯದ ಹೇಳಿಕೆಯನ್ನು ಉಲ್ಲೇಖಿಸಿ ಸ್ಟೇಟ್ ಸುದ್ದಿ ಸಂಸ್ಥೆ ಸೋಮವಾರ ತಡರಾತ್ರಿ ವರದಿ ಮಾಡಿದೆ.