ವಾಷಿಂಗ್ಟನ್: 13 ಮಂದಿ ಅಮೆರಿಕ ಯೋಧರ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಅಮೆರಿಕ ಸೇನೆ ಮುಂದಾಗಿದ್ದು ಮತ್ತೊಂದು ಯುದ್ಧಕ್ಕೆ ಅಣಿಯಾಗುತ್ತಿದೆ. ಐಸಿಸಿ ಸದೆಬಡಿಯಲು ಮತ್ತಷ್ಟು ಸೇನೆಯನ್ನು ಆಫ್ಘಾನಿಸ್ತಾನಕ್ಕೆ ರವಾನಿಸಲಿದ್ದು, ಅಫ್ಘಾನಿಸ್ತಾನದಲ್ಲಿ ಅಮೆರಿಕದ ಎರಡನೇ ಹಂತದ ಯುದ್ಧ ಶುರುವಾಗಲಿದೆ ಎನ್ನಲಾಗಿದೆ.
ಈ ಕುರಿತು ಯೋಜನೆ ರೂಪಿಸುವಂತೆ ಪೆಂಟಗಾನ್ ಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಸೂಚನೆ ನೀಡಿದ್ದಾರೆ. ಆಗಸ್ಟ್ 31 ರೊಳಗೆ ಅಮೆರಿಕ ಆಫ್ಘಾನಿಸ್ತಾನ ತೊರೆಯದಿರಲು ಚಿಂತನೆ ನಡೆಸಿದ್ದು, ಮತ್ತಷ್ಟು ಸೈನಿಕರನ್ನು ರವಾನಿಸಿ ತಾಲಿಬಾನ್, ಐಸಿಸ್ ಉಗ್ರರನ್ನು ಸದೆಬಡಿಯಲು ಮುಂದಾಗಿದೆ.
ಕಾಬೂಲ್ ಸ್ಪೋಟದಲ್ಲಿ ಅಮೆರಿಕ ಕಮಾಂಡೋಗಳು ಮೃತಪಟ್ಟ ನಂತರ ಬೆಂಕಿಯುಗುಳಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ನಮ್ಮ ವಿರುದ್ಧ ದಾಳಿ ಮಾಡುವವರು ಎಚ್ಚರಿಕೆಯಿಂದ ಇರಬೇಕು. ಯೋಧರನ್ನು ಹತ್ಯೆ ಮಾಡಿದವರನ್ನು ಸುಮ್ಮನೆ ಬಿಡುವುದಿಲ್ಲ. ಹುಡುಕಿ ಕೊಲ್ಲುತ್ತೇವೆ ಎಂದು ಗುಡುಗಿದ್ದಾರೆ.
13 ಮಂದಿ ಸೈನಿಕರ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಅಮೆರಿಕ ಮುಂದಾಗಿದೆ. ಕಾಬೂಲ್ ಸರಣಿ ಸ್ಫೋಟದಲ್ಲಿ 100 ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ಆತ್ಮಾಹುತಿ ದಾಳಿಗೆ 13 ಅಮೆರಿಕ ಸೈನಿಕರು, ಮಕ್ಕಳು ಸೇರಿ 90 ಮಂದಿ ನಾಗರಿಕರು ಮೃತಪಟ್ಟಿದ್ದಾರೆ. ಇದುವರೆಗೆ 103 ಜನರು ಬಲಿಯಾಗಿದ್ದಾರೆ. ಸಾವು, ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಕಾಬೂಲ್ ನಲ್ಲಿ ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಐಸಿಸ್ ನಿಂದ ಆತ್ಮಾಹುತಿ ಬಾಂಬರ್ ಫೋಟೋ ಬಿಡುಗಡೆಮಾಡಲಾಗಿದೆ ಅಬ್ದುಲ್ ರೆಹಮಾನ್ ಫೋಟೋ ಬಿಡುಗಡೆ ಮಾಡಲಾಗಿದೆ.