ನವದೆಹಲಿ: ಅಮೆರಿಕದ ಸೆಂಟ್ರಲ್ ಬ್ಯಾಂಕ್ ‘ಫೆಡರಲ್ ರಿಸರ್ವ್’ ಬಡ್ಡಿ ದರ ಕಡಿತದ ಮುನ್ಸೂಚನೆ ನೀಡಿದ್ದು, ಜಾಗತಿಕ ಆರ್ಥಿಕ ವಲಯದಲ್ಲಿ ಆಶಾಭಾವನೆ ಮೂಡಿಸಿದೆ. ಇದರಿಂದಾಗಿ ಭಾರತದಲ್ಲಿಯೂ ಆರ್.ಬಿ.ಐ. ಬಡ್ಡಿ ದರ ಇಳಿಕೆ ಮಾಡುವ ನಿರೀಕ್ಷೆ ಹೆಚ್ಚಿಸಿದೆ.
ಅಮೆರಿಕದ ಸೆಂಟ್ರಲ್ ಬ್ಯಾಂಕ್ ಫೆಡರಲ್ ರಿಸರ್ವ್ ಅಧ್ಯಕ್ಷ ಜೆರೋಮ್ ಪೊವೆಲ್ ಅವರು, ಅಮೆರಿಕ ಆರ್ಥಿಕತೆ ಹಣದುಬ್ಬರ ಸಂಕಷ್ಟದಿಂದ ಹೊರಬಂದಿದ್ದು, ಬಡ್ಡಿ ದರ ಕಡಿತಗೊಳಿಸುವ ಸಮಯ ಬಂದಿದೆ ಎಂದು ತಿಳಿಸಿದ್ದಾರೆ.
ಅಮೆರಿಕದಲ್ಲಿ ಬಡ್ಡಿ ದರ ಕಡಿಮೆಯಾದಲ್ಲಿ ಜಾಗತಿಕ ಆರ್ಥಿಕತೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಭಾರತದಲ್ಲಿ ಷೇರುಪೇಟೆ ಮತ್ತಷ್ಟು ಜಿಗಿಯಲಿದೆ. ವಿದೇಶಿ ಹೂಡಿಕೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತದೆ.
ದೇಶದಲ್ಲಿ ಈಗಾಗಲೇ ಸಗಟು ಹಣದುಬ್ಬರ ಇಳಿಮುಖವಾಗಿದ್ದು, ಆರ್‌ಬಿಐ ಅಕ್ಟೋಬರ್ 7ರಿಂದ 9ರ ವರೆಗೆ ನಡೆಯುವ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ಸಭೆಯಲ್ಲಿ ಬಡ್ಡಿ ದರ ಕಡಿತ ಮಾಡುವ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.