ಚಳಿಗಾಲದ ಚಂಡಮಾರುತವು ಭಾನುವಾರದಂದು ಯುನೈಟೆಡ್ ಸ್ಟೇಟ್ಸ್‌ನ ಮಧ್ಯಭಾಗವನ್ನು ಅಪ್ಪಳಿಸಿ ಹಾದುಹೋಗಿದ್ದು, ಹಿಮ, ಮಂಜುಗಡ್ಡೆ, ಬಲವಾದ ಗಾಳಿ ಮತ್ತು ತೀವ್ರ ತಾಪಮಾನ ಕುಸಿತದಿಂದಾಗಿ ಅಪಾಯಕಾರಿ ಪರಿಸ್ಥಿತಿಗಳು ಉಂಟಾಗಿದೆ. ಕೆಲವು ಪ್ರದೇಶಗಳಲ್ಲಿ “ಒಂದು ದಶಕದಲ್ಲಿ ಅತಿ ಹೆಚ್ಚು ಹಿಮಪಾತ” ಸಂಭವಿಸುವ ಸಾಧ್ಯತೆಯಿದೆ ಎಂದು ಹವಾಮಾನ ಶಾಸ್ತ್ರಜ್ಞರು ಎಚ್ಚರಿಸಿದ್ದಾರೆ.
ಕೆಂಟುಕಿ, ವರ್ಜೀನಿಯಾ, ವೆಸ್ಟ್ ವರ್ಜೀನಿಯಾ, ಕನ್ಸಾಸ್, ಅರ್ಕಾನ್ಸಾಸ್ ಮತ್ತು ಮಿಸ್ಸೌರಿ ರಾಜ್ಯಗಳಲ್ಲಿ ʼತುರ್ತು ಪರಿಸ್ಥಿತಿʼ ಘೋಷಿಸಲಾಗಿದೆ. ಸಾಮಾನ್ಯವಾಗಿ ಬೆಚ್ಚಗಿರುವ ಫ್ಲೋರಿಡಾ ಕೂಡ ಅಪರೂಪದ ಘನೀಭವನದ ಪರಿಸ್ಥಿತಿಗಳಿಗೆ ಸಿದ್ಧವಾಗುತ್ತಿದೆ.
ನ್ಯಾಷನಲ್ ವೆದರ್ ಸರ್ವಿಸ್ ಕನ್ಸಾಸ್ ಮತ್ತು ಮಿಸ್ಸೌರಿಗೆ ಚಂಡಮಾರುತ ಎಚ್ಚರಿಕೆಯನ್ನು ನೀಡಿದೆ. ವಿಶೇಷವಾಗಿ ಇಂಟರ್ಸ್ಟೇಟ್ 70 ರ ಉತ್ತರದ ಪ್ರದೇಶಗಳಲ್ಲಿ ಕನಿಷ್ಠ 8 ಇಂಚು ಹಿಮ ಬೀಳುವ ನಿರೀಕ್ಷೆಯಿದೆ. ಬಲವಾದ ಗಾಳಿ ಗಂಟೆಗೆ 45 ಮೈಲಿ ವೇಗದಲ್ಲಿ ಬೀಸಿ ಚಂಡಮಾರುತದ ಪರಿಸ್ಥಿತಿಗಳನ್ನು ಸೃಷ್ಟಿಸಿತು. ಈ ಎಚ್ಚರಿಕೆಯನ್ನು ಸೋಮವಾರ ಮತ್ತು ಮಂಗಳವಾರ ಬೆಳಗ್ಗೆಯವರೆಗೆ ನ್ಯೂಜೆರ್ಸಿಗೆ ವಿಸ್ತರಿಸಲಾಯಿತು. ಭಾರೀ ಹಿಮಪಾತ ಮತ್ತು ಅಪಾಯಕಾರಿ ಹವಾಮಾನ ಪರಿಸ್ಥಿತಿಗಳಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ.