ಅಮೆರಿಕಾದ ಪ್ರಥಮ ಮಹಿಳೆ ಜಿಲ್ ಬಿಡೆನ್ ಅವರಿಗೆ ಮತ್ತೆ ಕೋವಿಡ್ ಸೋಂಕು ತಗುಲಿದ್ದು, ಆದರೆ ಅಧ್ಯಕ್ಷ ಜೋ ಬಿಡೆನ್ ಅವರ ವರದಿ ನೆಗೆಟಿವ್ ತೋರಿಸಿದೆ ಎಂದು ಸೋಮವಾರದಂದು ಶ್ವೇತ ಭವನದ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೌಮ್ಯ ಸೋಂಕಿನಿಂದ ಬಳಲುತ್ತಿದ್ದ ಜಿಲ್ ಬಿಡೆನ್ ಅವರಿಗೆ ಕೋವಿಡ್ ಪರೀಕ್ಷೆ ನಡೆಸಿದ ವೇಳೆ ಪಾಸಿಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಜೋ ಬಿಡೆನ್ ಅವರಿಗೂ ಸಹ ಪರೀಕ್ಷೆ ನಡೆಸಲಾಗಿದ್ದು, ಆದರೆ ಅವರ ವರದಿ ನೆಗೆಟಿವ್ ತೋರಿಸಿದೆ. ಜಿಲ್ ಬಿಡೆನ್ ಈಗ ಡೆಲ್ವೇರ್ ನ ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಜಿ 20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜೋ ಬಿಡೆನ್ ಗುರುವಾರದಂದು ನವದೆಹಲಿಗೆ ಆಗಮಿಸಬೇಕಿದ್ದು, ಅವರ ಪ್ರವಾಸದ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲವೆಂದು ಹೇಳಲಾಗುತ್ತಿದೆ. ಕಳೆದ ವರ್ಷ ಜೋ ಬಿಡೆನ್ ಹಾಗೂ ಜಿಲ್ ಬಿಡೆನ್ ಇಬ್ಬರಿಗೂ ಕೋವಿಡ್ ಸೋಂಕು ತಗುಲಿದ್ದು, ಜಿಲ್ ಬಿಡೆನ್ ಅವರಿಗೆ ಕಳೆದ ವರ್ಷದ ಆಗಸ್ಟ್ ನಲ್ಲಿ ಜೋ ಬಿಡೆನ್ ಅವರಿಗೆ ಜುಲೈ 2022ರಲ್ಲಿ ಪಾಸಿಟಿವ್ ವರದಿ ಬಂದಿತ್ತು.