ವಾಷಿಂಗ್ಟನ್: ಅಮೆರಿಕದಲ್ಲಿ ನಡೆದ ಕಪ್ಪು ವರ್ಣೀಯ ವ್ಯಕ್ತಿ ಜಾರ್ಜ್ ಫ್ಲಾಯ್ಡ್ ಹತ್ಯೆ ಪ್ರಕರಣದಲ್ಲಿ ಬಿಳಿಯ ಪೊಲೀಸ್ ಅಧಿಕಾರಿ ಡೆರೆಕ್ ಚೌವಿನ್ ಅರಪರಾಧಿ ಎಂದು ಕೋರ್ಟ್ ತೀರ್ಪು ನೀಡಿದೆ.
ಜಾರ್ಜ್ ಫ್ಲಾಯ್ಡ್ ಹತ್ಯೆ ಪ್ರಕರಣದಲ್ಲಿ ಡೆರೆಕ್ ಚೌವಿನ್ ದೋಷಿ ಎಂದು ಹೆನ್ನೆಪಿನ್ ಕೌಂಟಿ ಕೋರ್ಟ್ ನಿಂದ ಮಹತ್ವದ ತೀರ್ಪು ಪ್ರಕಟಿಸಲಾಗಿದೆ. ಅಮೆರಿಕದ ಮಿನಿಯಾಪೊಲಿಸ್ ನಲ್ಲಿ ಈ ಘಟನೆ ನಡೆದಿದ್ದು, ಪೊಲೀಸ್ ವಶದಲ್ಲಿದ್ದಾಗಲೇ ಜಾರ್ಜ್ ಫ್ಲಾಯ್ಡ್ ಮೃತಪಟ್ಟಿದ್ದರು. ಈ ಪ್ರಕರಣ ಭಾರೀ ಕೋಲಾಹಲ ಸೃಷ್ಟಿಸಿತ್ತು.
ಜಾರ್ಜ್ ಫ್ಲಾಯ್ಡ್ ಕುತ್ತಿಗೆ ಮೇಲೆ ಕಾಲು ಒತ್ತಿ ಹಿಡಿದು ಡೆರೆಕ್ ಚೌವಿನ್ ಅಮಾನವೀಯವಾಗಿ ವರ್ತಿಸಿದ್ದರು ಇದರಿಂದಾಗಿ ಫ್ಲಾಯ್ಡ್ ಮೃತಪಟ್ಟು ಅಮೆರಿಕದಲ್ಲಿ ಭಾರೀ ಪ್ರತಿಭಟನೆ, ಹಿಂಸಾಚಾರಕ್ಕೆ ಕಾರಣವಾಗಿತ್ತು. ಜನಾಂಗೀಯ ದೌರ್ಜನ್ಯವೆಂದು ಭಾರೀ ಆಕ್ರೋಶ ವ್ಯಕ್ತವಾಗಿತ್ತು.
ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು, ಈ ತೀರ್ಪು ಅಮೆರಿಕ ನ್ಯಾಯ ಪಥದಲ್ಲಿ ಸಾಗುವ ಮುನ್ನಡೆಗೆ ಒಂದು ದೊಡ್ಡ ಹೆಜ್ಜೆ. ಜಾರ್ಜ್ ಫ್ಲಾಯ್ಡ್ ನನ್ನು ಮರಳಿ ತರಲು ಸಾಧ್ಯವಾಗದಿದ್ದರೂ, ಇದು ಅಮೆರಿಕದ ನ್ಯಾಯ ವ್ಯವಸ್ಥೆಯ ಒಂದು ದೊಡ್ಡ ಹೆಜ್ಜೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.