ಅಮೆರಿಕಾ ಸಂಯುಕ್ತ ಸಂಸ್ಥಾನವು ಭಾರತೀಯ ವಲಸಿಗರನ್ನು ಮರಳಿ ಭಾರತಕ್ಕೆ ಗಡಿಪಾರು ಮಾಡಲು ಪ್ರಾರಂಭಿಸಿದೆ ಎಂದು ʼರಾಯಿಟರ್ಸ್ʼ ಸುದ್ದಿ ಸಂಸ್ಥೆ ವರದಿ ಮಾಡಿದೆ. ವಲಸಿಗರನ್ನು ಸಾಗಿಸಲು ಮಿಲಿಟರಿ ಸಾರಿಗೆ ವಿಮಾನಗಳನ್ನು ಬಳಸಲಾಗುತ್ತಿದೆ. ಈ ಕ್ರಮವು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತದ ಕಠಿಣ ವಲಸೆ ನೀತಿಯ ಭಾಗವಾಗಿದೆ.
ಹೆಚ್ಚುವರಿ ಪಡೆಗಳನ್ನು ಯುಎಸ್-ಮೆಕ್ಸಿಕೋ ಗಡಿಗೆ ಕಳುಹಿಸುವುದು, ವಲಸಿಗರನ್ನು ಗಡಿಪಾರು ಮಾಡಲು ಮಿಲಿಟರಿ ವಿಮಾನಗಳನ್ನು ಬಳಸುವುದು ಮತ್ತು ಅವರನ್ನು ಮಿಲಿಟರಿ ನೆಲೆಗಳಲ್ಲಿ ಇರಿಸುವುದು ಸೇರಿದಂತೆ ತಮ್ಮ ವಲಸೆ ಕಾರ್ಯಸೂಚಿಯನ್ನು ಜಾರಿಗೊಳಿಸಲು ಟ್ರಂಪ್ ಆಡಳಿತವು ಮಿಲಿಟರಿಯನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿದೆ.
ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ́ರಾಯಿಟರ್ಸ್́ಗೆ ತಿಳಿಸಿದ ಪ್ರಕಾರ, C-17 ವಿಮಾನವು ವಲಸಿಗರನ್ನು ಹೊತ್ತು ಭಾರತಕ್ಕೆ ತೆರಳಿದೆ.
ಪೆಂಟಗನ್ ಟೆಕ್ಸಾಸ್ನ ಎಲ್ ಪಾಸೊ ಮತ್ತು ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋದಲ್ಲಿ ಯುಎಸ್ ಅಧಿಕಾರಿಗಳು ವಶಪಡಿಸಿಕೊಂಡಿರುವ 5,000 ಕ್ಕೂ ಹೆಚ್ಚು ವಲಸಿಗರನ್ನು ಗಡಿಪಾರು ಮಾಡಲು ವಿಮಾನಗಳನ್ನು ಒದಗಿಸಲು ಪ್ರಾರಂಭಿಸಿದೆ. ಈ ಹಿಂದೆ, ಮಿಲಿಟರಿ ವಿಮಾನಗಳು ವಲಸಿಗರನ್ನು ಗ್ವಾಟೆಮಾಲಾ, ಪೆರು ಮತ್ತು ಹೊಂಡುರಾಸ್ಗೆ ತಲುಪಿಸಿವೆ.
ಇದಲ್ಲದೆ, ಅಮೆರಿಕಾದಲ್ಲಿ ನೆಲೆಸಿರುವ ವೆನೆಜುವೆಲಾದವರಿಗೂ ಗಡಿಪಾರು ಭೀತಿ ಎದುರಾಗಿದೆ. ಸುಮಾರು 348,000 ವೆನೆಜುವೆಲಾದವರು ತಾತ್ಕಾಲಿಕ ರಕ್ಷಣಾ ಸ್ಥಾನಮಾನವನ್ನು ಹೊಂದಿದ್ದು, ಅವರನ್ನು ಗಡಿಪಾರು ಮಾಡುವ ಸಾಧ್ಯತೆ ಇದೆ.