ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಜಾರಿಗೆ ತಂದಿದ್ದ ಹೆಚ್ 1 ಬಿ ವೀಸಾಗೆ ಸಂಬಂಧಪಟ್ಟ ನಿಯಮಗಳನ್ನು ಕ್ಯಾಲಿಫೋರ್ನಿಯಾ ಜಿಲ್ಲಾ ನ್ಯಾಯಾಧೀಶರು ರದ್ದುಪಡಿಸಿ ಆದೇಶ ಹೊರಡಿಸಿದ್ದಾರೆ.
ಅಮೆರಿಕ ಕಂಪನಿಗಳಲ್ಲಿ ವಿದೇಶಿ ಉದ್ಯೋಗಿಗಳನ್ನು ನೇಮಿಸಲು ತಡೆ ನೀಡಲು ಡೊನಾಲ್ಡ್ ಟ್ರಂಪ್ ಆಡಳಿತ ನಿರ್ಬಂಧ ವಿಧಿಸಿತ್ತು. ಹೆಚ್ 1 ಬಿ ವೀಸಾದಡಿ ಬರುವ ವಿದೇಶಿ ಉದ್ಯೋಗಿಗಳಿಗೆ ಅಮೆರಿಕ ಕಂಪನಿಗಳು ಅತಿ ಹೆಚ್ಚು ವೇತನ ಕೊಡಬೇಕು ಎಂದು ಹೇಳಲಾಗಿತ್ತು.
ಈ ನಿಯಮವನ್ನು ಕೋರ್ಟ್ ರದ್ದುಪಡಿಸಿದೆ. ಇದರಿಂದಾಗಿ ಭಾರತದ ಸಾವಿರಾರು ಮಾಹಿತಿ ತಂತ್ರಜ್ಞಾನ ವೃತ್ತಿಪರರು ಮತ್ತು ಕಂಪನಿಗಳಿಗೆ ಅನುಕೂಲವಾಗಲಿದೆ. ವಿದೇಶದ ಉದ್ಯೋಗಿಗಳನ್ನು ಅಮೆರಿಕ ಕಂಪನಿಗಳಿಗೆ ನೇಮಕಾತಿ ಮಾಡಿಕೊಳ್ಳಲು ಹೆಚ್ 1 ಬಿ ವೀಸಾ ಅವಕಾಶ ನೀಡಲಿದೆ.
ಪ್ರತಿ ವರ್ಷ ಅಮೆರಿಕದಿಂದ 85 ಸಾವಿರ ಹೆಚ್ 1 ಬಿ ವೀಸಾ ವಿತರಿಸಲಾಗುತ್ತದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತ ವೀಸಾಗೆ ನಿರ್ಬಂಧ ಹೇರಿದ್ದನ್ನು ಪ್ರಶ್ನಿಸಿ ಅಮೆರಿಕದ ವಾಣಿಜ್ಯೋದ್ಯಮ ಸಂಘ, ಪ್ರಮುಖ ವಿಶ್ವವಿದ್ಯಾನಿಲಯಗಳು, ಫೇಸ್ಬುಕ್, ಗೂಗಲ್, ಮೈಕ್ರೋಸಾಫ್ಟ್ ಸೇರಿದಂತೆ ಪ್ರಮುಖ ಕಂಪನಿಗಳು ಕೋರ್ಟ್ ಮೆಟ್ರಿಲೇರಿದ್ದು, ಕ್ಯಾಲಿಫೋರ್ನಿಯಾ ಜಿಲ್ಲಾ ಕೋರ್ಟ್ ನ್ಯಾಯಾಧೀಶ ಜೆಫ್ರಿ ವೈಟ್ ಅವರು ಹೆಚ್ 1 ಬಿ ವೀಸಾ ಕುರಿತಾಗಿ ಟ್ರಂಪ್ ಆಡಳಿತ ತಂದಿದ್ದ ನಿಯಮ ರದ್ದು ಮಾಡಿದ್ದಾರೆ.