
ವಾಷಿಂಗ್ಟನ್: ಜಾಗತಿಕವಾಗಿ 70 ಲಕ್ಷ ಜನರನ್ನು ಬಲಿ ಪಡೆದ ಕೋವಿಡ್ -19 ಸಾಂಕ್ರಾಮಿಕ ಹರಡಲು ಚೀನಾ ಸರ್ಕಾರ ನೇರ ಹೊಣೆಯಾಗಿದೆ ಎಂದು ಅಮೆರಿಕದ ಮಿಸ್ಸೌರಿ ಫೆಡರಲ್ ನ್ಯಾಯಾಲಯ ಹೇಳಿದ್ದು, 2.09 ಲಕ್ಷ ಕೋಟಿ ದಂಡ ವಿಧಿಸಿ ತೀರ್ಪು ನೀಡಿದೆ.
ಸಾಂಕ್ರಾಮಿಕ ರೋಗ ವ್ಯಾಪಕವಾಗಿ ಹರಡುವ ಸಮಯದಲ್ಲಿ ಪಿಪಿಇ ಕಿಟ್ ಗಳ ಮೇಲೆ ಏಕಸ್ವಾಮ್ಯ ಸಾಧಿಸಲು ಮುಂದಾಗುವ ಮೂಲಕ ಜನರ ಮಾರಣಹೋಮಕ್ಕೆ ಚೀನಾ ಸರ್ಕಾರ ಕಾರಣವಾಗಿದೆ ಎಂದು ಅಮೆರಿಕದ ಮಿಸ್ಸೌರಿ ಫೆಡರಲ್ ನ್ಯಾಯಾಧೀಶ ಸ್ಟೀಫನ್ ಎನ್. ಲಿಂಬೌಫ್ ಆದೇಶದಲ್ಲಿ ತಿಳಿಸಿದ್ದಾರೆ.
ಸಾಂಕ್ರಾಮಿಕ ರೋಗದ ಬಗ್ಗೆ ಮಾಹಿತಿ ಮುಚ್ಚಿಟ್ಟ ಆರೋಪ, ಜನರ ಸಾವಿನ ನಡುವೆ ಚಿಕಿತ್ಸಾ ಉಪಕರಣಗಳ ಮೇಲೆ ಹಕ್ಕು ಸ್ವಾಮ್ಯ ಸ್ಥಾಪಿಸಲು ಪ್ರಯತ್ನ, ಬೇರೆ ದೇಶಗಳಿಗೆ ದುಪ್ಪಟ್ಟು ಬೆಲೆಗೆ ಪಿಪಿಇ ಕಿಟ್ ಮಾರಾಟ ಮಾಡಿದ ಆರೋಪದ ಮೇಲೆ ಚೀನಾಗೆ 24 ಬಿಲಿಯನ್ ಅಮೆರಿಕನ್ ಡಾಲರ್ ದಂಡ ವಿಧಿಸಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.
ಚೀನಾದ ವುಹಾನ್ ಲ್ಯಾಬ್ ನಲ್ಲಿ ಕೋವಿಡ್ ಸಾಂಕ್ರಾಮಿಕ ವೈರಸ್ ಸೃಷ್ಟಿಸಲಾಗಿದೆ. ಪಿಪಿಇ ಕಿಟ್ ಗಳ ಉತ್ಪಾದನೆ, ರಫ್ತು ತಡೆಯುವ ಮೂಲಕ ರೋಗ ಉಲ್ಬಣಕ್ಕೆ ಚೀನಾ ಕಾರಣವಾಗಿದೆ ಎಂದು ಆರೋಪಿಸಿ ಮಿಸ್ಸೌರಿ ಫೆಡರಲ್ ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು.