ಅಮೆರಿಕಾದ ಅಟ್ಲಾಂಟಾದಲ್ಲಿ ಪೊಲೀಸರ ಗಸ್ತು ವಾಹನವನ್ನ ಕದ್ದು ಓಡುತ್ತಿದ್ದ ವ್ಯಕ್ತಿಯ ಪ್ರಾಣವನ್ನ ಪೊಲೀಸರು ಕಾಪಾಡಿದ್ದಾರೆ. ರೈಲು ಹಳಿಯ ಮೇಲೆ ಕಾರಿನ ಚಾಲಕನಿಗೆ ರೈಲು ಡಿಕ್ಕಿ ಹೊಡೆಯುವ ಕೆಲವೇ ಸೆಕೆಂಡ್ ಗಳ ಮೊದಲು ಆತನನ್ನು ರಕ್ಷಿಸಿದ್ದಾರೆ.
ಅಟ್ಲಾಂಟಾ ಪೋಲೀಸ್ ಡಿಪಾರ್ಟ್ಮೆಂಟ್ ಬಿಡುಗಡೆ ಮಾಡಿದ ವಿಡಿಯೋ ತುಣುಕಿನಲ್ಲಿ ರೋಚಕ ಕ್ಷಣಗಳು ಸೆರೆಯಾಗಿವೆ. ಮಾಧ್ಯಮ ವರದಿಗಳ ಪ್ರಕಾರ ಜನವರಿ 28 ರ ಮುಂಜಾನೆ ಅಧಿಕಾರಿಗಳು ಟ್ರಾಫಿಕ್ ನಿಯಂತ್ರಣ ಕರ್ತವ್ಯದಲ್ಲಿದ್ದ ವೇಳೆ ಪೊಲೀಸ್ ಕ್ರೂಸರ್ ಅನ್ನು ಕಳವು ಮಾಡಲಾಗಿದೆ. ಕದ್ದ ಕಾರನ್ನ ನಿಲ್ಲಿಸದೇ ಓಡುತ್ತಿದ್ದ ಕಳ್ಳನನ್ನ ಪೊಲೀಸರು ಹಿಂಬಾಲಿಸಿದ್ದಾರೆ.
ಆತ ಕಾರ್ ನ ನಿಯಂತ್ರಣ ಕಳೆದುಕೊಂಡು ರೈಲು ಹಳಿಗಳ ಮೇಲೆ ಪಲ್ಟಿಯಾಗುವ ಮೊದಲು ಪೊಲೀಸ್ ಘಟಕವು ಹೆಲಿಕಾಪ್ಟರ್‌ನಿಂದ ಕದ್ದ ವಾಹನವನ್ನು ಟ್ರ್ಯಾಕ್ ಮಾಡಿದೆ.
ಅನುಮಾನಾಸ್ಪದ ವ್ಯಕ್ತಿ ಪಲ್ಟಿಯಾದ ಕಾರಿನಲ್ಲಿ ಸಿಲುಕಿಕೊಂಡಿದ್ದ. ರೈಲು ಹಳಿ ಮೇಲೆ ಕಾರ್ ಬಿದ್ದಿತ್ತು. ಈ ವೇಳೆ ರೈಲು ವೇಗವಾಗಿ ಬರುತ್ತಿತ್ತು. ಅಧಿಕಾರಿಗಳು ಸರಿಯಾದ ಸಮಯಕ್ಕೆ ಘಟನಾ ಸ್ಥಳಕ್ಕೆ ಆಗಮಿಸಿ ಶಂಕಿತರನ್ನು ವಾಹನದಿಂದ ರಕ್ಷಿಸಿದರು. ರೈಲು ಬರುವ ಕೆಲವೇ ಸೆಕಂಡ್ ಗಳ ಮುನ್ನ ಆತನನ್ನ ಕಾರ್ ನಿಂದ ಹೊರಗೆಳೆದು ರಕ್ಷಿಸಿದ್ದಾರೆ. ಮುಂದೆ ಬರುತ್ತಿದ್ದ ರೈಲು ಹಳಿಗಳ ಮೇಲೆ ಇದ್ದ ಕ್ರೂಸರ್‌ಗೆ ಅಪ್ಪಳಿಸುತ್ತದೆ.
29 ವರ್ಷದ ಮೈಕಲ್ ಪಾರ್ಕರ್ ಎಂದು ಗುರುತಿಸಲಾದ ಶಂಕಿತನ ಮೇಲೆ ಹಲವಾರು ಅಪರಾಧಗಳ ಆರೋಪವಿದೆ ಎಂದು ಅಟ್ಲಾಂಟಾ ಪೊಲೀಸರು ತಿಳಿಸಿದ್ದಾರೆ. ಅವರನ್ನು ಫುಲ್ಟನ್ ಕೌಂಟಿ ಜೈಲಿನಲ್ಲಿ ಬಂಧಿಸಲಾಯಿತು.