ಅಮೆರಿಕದ ಇಂಡಿಯಾನಾದ ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ 23 ವರ್ಷದ ಭಾರತೀಯ ಮೂಲದ ವಿದ್ಯಾರ್ಥಿಯೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ. ಮೃತರನ್ನು ಸಮೀರ್ ಕಾಮತ್ ಎಂದು ಗುರುತಿಸಲಾಗಿದೆ. ಪರ್ಡ್ಯೂ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದ ಭಾರತೀಯ ವಿದ್ಯಾರ್ಥಿ ನೀಲ್ ಆಚಾರ್ಯ ಕ್ಯಾಂಪಸ್ ಆವರಣದಲ್ಲಿ ಶವವಾಗಿ ಪತ್ತೆಯಾದ ಕೆಲವೇ ದಿನಗಳಲ್ಲಿ ಮತ್ತೊಂದು ಘಟನೆ ಸಂಭವಿಸಿದೆ.
ಅಮೆರಿಕದ ಪೌರತ್ವ ಹೊಂದಿದ್ದ ಕಾಮತ್ ಅವರು ವಿಶ್ವವಿದ್ಯಾನಿಲಯದಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ನಲ್ಲಿ ಪಿಹೆಚ್ಡಿ ವ್ಯಾಸಂಗ ಮಾಡುತ್ತಿದ್ದರು. ವಾರೆನ್ ಕೌಂಟಿ ಕರೋನರ್ ಪ್ರಕಾರ, ಅವರು ಸೋಮವಾರ ಸ್ಥಳೀಯ ಕಾಲಮಾನ ಸಂಜೆ 5 ಗಂಟೆಗೆ ಶವವಾಗಿ ಪತ್ತೆಯಾಗಿದ್ದಾರೆ. ಮಂಗಳವಾರ ಮಧ್ಯಾಹ್ನ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಭಾರತೀಯರು ಅಥವಾ ಭಾರತೀಯ ಮೂಲದ ವಿದ್ಯಾರ್ಥಿಗಳನ್ನು ಒಳಗೊಂಡ ಸರಣಿ ದುರಂತ ಘಟನೆಗಳಿಗೆ US ಸಾಕ್ಷಿಯಾಗಿದೆ. ಜನವರಿ 2024 ರಿಂದ ಕಾಮತ್ ಐದನೇ ಬಲಿಪಶುವಾಗಿದ್ದಾರೆ. ಕಳೆದ ವಾರ ಇಂಡಿಯಾನಾದ ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಡೇಟಾ ಸೈನ್ಸ್ ವಿದ್ಯಾರ್ಥಿ ಆಚಾರ್ಯ ನಾಪತ್ತೆಯಾದ ನಂತರ ಕ್ಯಾಂಪಸ್ ಮೈದಾನದಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು.
ಆಚಾರ್ಯ ಅವರ ಮೊದಲು, ಸಿನ್ಸಿನಾಟಿಯ ಲಿಂಡ್ನರ್ ಸ್ಕೂಲ್ ಆಫ್ ಬ್ಯುಸಿನೆಸ್ನ ವಿದ್ಯಾರ್ಥಿ ಶ್ರೇಯಸ್ ರೆಡ್ಡಿ ಬೆನಿಗೇರಿ ಓಹಿಯೋದಲ್ಲಿ ಶವವಾಗಿ ಪತ್ತೆಯಾಗಿದ್ದರು.
ಜನವರಿ 16 ರಂದು ಎಂಬಿಎ ಪದವೀಧರ ವಿವೇಕ್ ಸೈನಿಯನ್ನು ಜಾರ್ಜಿಯಾದ ಲಿಥೋನಿಯಾದ ಅಂಗಡಿಯೊಂದರಲ್ಲಿ ವ್ಯಕ್ತಿಯೊಬ್ಬ ಸುತ್ತಿಗೆಯಿಂದ ಪದೇ ಪದೇ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದ. ಅದಾಗಿ ನಾಲ್ಕು ದಿನಗಳ ನಂತರ ಜನವರಿ 20 ರಂದು 18 ವರ್ಷದ ಭಾರತೀಯ-ಅಮೆರಿಕನ್ ವಿದ್ಯಾರ್ಥಿ ಅಕುಲ್ ಧವನ್ ಇಲಿನಾಯ್ಸ್ ವಿಶ್ವವಿದ್ಯಾಲಯದ ಸಮೀಪವಿರುವ ಕಟ್ಟಡದ ಹಿಂಭಾಗದಲ್ಲಿ ಶವವಾಗಿ ಪತ್ತೆಯಾಗಿದ್ದರು.