ಹೈದರಾಬಾದ್: ವ್ಯಕ್ತಿಯೊಬ್ಬ ತನ್ನ ಗೆಳತಿಯ ಪತಿಯನ್ನು ಕೊಲೆ ಮಾಡಿ, ಆತನ ದೇಹವನ್ನು ತುಂಡರಿಸಿದ ಆಘಾತಕಾರಿ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಛಿದ್ರಗೊಂಡ ಮೃತದೇಹವನ್ನು ರಾಮಗುಂಡಂನಲ್ಲಿ ಪತ್ತೆ ಹಚ್ಚಿದ ಎರಡು ದಿನಗಳ ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸಾಕ್ಷಿಯನ್ನು ನಾಶಪಡಿಸುವ ಸಲುವಾಗಿ ಕೊಂದ ಬಳಿಕ ದೇಹದ ಭಾಗಗಳನ್ನು ಹಲವು ಪ್ರದೇಶಗಳಲ್ಲಿ ಆರೋಪಿಯು ಎಸೆದಿದ್ದಾನೆ. ಕೊಲೆಯಾದ ವ್ಯಕ್ತಿಯ ತುಂಡರಿಸಿದ ತಲೆ, ಕೈಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಯನ್ನು ಪಿ ರಾಜು ಎಂದು ಗುರುತಿಸಲಾಗಿದೆ. ರಾಮಗುಂಡಂನ ಎನ್ಟಿಪಿಸಿ ಆಸ್ಪತ್ರೆಯೊಂದರಲ್ಲಿ ಸ್ವೀಪರ್ ಆಗಿ ಕೆಲಸ ಮಾಡುತ್ತಿದ್ದ ರಾಜು, ತನ್ನ 31 ವರ್ಷದ ಸಹೋದ್ಯೋಗಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಅನೈತಿಕ ಸಂಬಂಧದ ಶಂಕೆಯಿಂದ ಮಹಿಳೆಯ ಪತಿ ಆಕೆಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ನವೆಂಬರ್ 26 ರಂದು ಕೊಲೆಯಾದ ಶಂಕರ್ ಅವರ ತಾಯಿ ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದರು. ನ.25ರ ರಾತ್ರಿ ಮನೆಯಿಂದ ಹೋದ ಮಗ ವಾಪಸ್ ಬಂದಿಲ್ಲ ಎಂದು ಹೇಳಿದ್ದಾರೆ. ನವೆಂಬರ್ 27 ರಂದು, ಎನ್ಟಿಪಿಸಿ ಕೂಲಿಂಗ್ ಟವರ್ಗಳ ಬಳಿ ಮಲ್ಲಯಾಲಪಲ್ಲಿ ಕ್ರಾಸ್ರೋಡ್ಸ್ ಬಳಿ ಶಂಕರ್ ಅವರ ತುಂಡರಿಸಿದ ದೇಹದ ಭಾಗಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಘಟನೆಯ ಹಿಂದೆ ಸೊಸೆ ಮತ್ತು ಪ್ರಿಯಕರನ ಕೈವಾಡವಿದೆ ಎಂದು ಶಂಕರ್ನ ತಾಯಿ ಶಂಕೆ ವ್ಯಕ್ತಪಡಿಸಿದ್ದರು. ರಾಜುನನ್ನು ವಿಚಾರಣೆ ಮಾಡಿದ ವೇಳೆ ಶಂಕರ್ ನನ್ನು ಕೊಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಶಂಕರ್ ತನ್ನ ಪತ್ನಿಯ ನಿಷ್ಠೆಯನ್ನು ಶಂಕಿಸಿ ಕಿರುಕುಳ ನೀಡುತ್ತಿದ್ದ. ರಾಜು ಜೊತೆ ಕಿರುಕುಳದ ಬಗ್ಗೆ ಚರ್ಚಿಸಿ ಶಂಕರ್ನನ್ನು ಹತ್ಯೆ ಮಾಡಲು ನಿರ್ಧರಿಸಿದ್ದಾರೆ.
ಆರೋಪಿಗಳು ತೆಲುಗು ಸಿನಿಮಾಗಳಿಂದ ಸ್ಫೂರ್ತಿ ಪಡೆದು ಬೇರೆ ಬೇರೆ ಸ್ಥಳಗಳಲ್ಲಿ ಶವದ ಭಾಗಗಳನ್ನು ಎಸೆದಿದ್ದಾರೆ ಎಂದು ವರದಿಯಾಗಿದೆ. ಘಟನೆಯ ನಂತರ ರಾಜು ಮತ್ತು ಆತನ ಗೆಳತಿಯನ್ನು ಬಂಧಿಸಲಾಗಿದೆ.