ಪ್ರೇಮ ಸಂಬಂಧದಿಂದ ಪೊಲೀಸ್ ಪೇದೆಯೊಬ್ಬ ತನ್ನ ಗೆಳತಿಗೆ ಗುಂಡು ಹಾರಿಸಿ ನಂತರ ಆಕೆಯ ತಂದೆಯನ್ನು ಕೊಂದು ಕೊನೆಗೆ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಧ್ಯಪ್ರದೇಶದ ಶಾಜಾಪುರ ಜಿಲ್ಲೆಯಲ್ಲಿ ಈ ಘಟನೆ ವರದಿಯಾಗಿದೆ.
ಚಾಲಕರಾಗಿ ಕೆಲಸ ಮಾಡುತ್ತಿದ್ದ ಆರೋಪಿತ ಪೊಲೀಸ್ ಮೊದಲು ಗೆಳತಿಗೆ ಗುಂಡು ಹಾರಿಸಿ ಬಳಿಕ ಅವಳ ತಂದೆಯನ್ನು ಕೊಂದ ತರುವಾಯ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆರೋಪಿ ಕಾನ್‌ಸ್ಟೆಬಲ್ 26 ವರ್ಷದ ಸುಭಾಷ್ ಖರಾಡಿ , ಬರ್ಚಾ ಪೊಲೀಸ್ ಠಾಣೆ ವ್ಯಾಪ್ತಿಯ ಮಲಿಖೇಡಿಯಲ್ಲಿ 55 ವರ್ಷ ವಯಸ್ಸಿನ ಜೈಕರ್ ಶೇಖ್ ಅವರ ನಿವಾಸಕ್ಕೆ ದೇಶೀ ನಿರ್ಮಿತ ಪಿಸ್ತೂಲ್‌ನೊಂದಿಗೆ ಸೋಮವಾರ ಮಧ್ಯರಾತ್ರಿ 1 ಗಂಟೆಗೆ ಪ್ರವೇಶಿಸಿದ್ದ. ಜೈಕರ್ ಶೇಖ್ ಮತ್ತು ಅವರ 25 ವರ್ಷದ ಮಗಳ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದ. ದುರದೃಷ್ಟವಶಾತ್ ಜೈಕರ್ ಶೇಖ್ ಅವರು ಸ್ಥಳದಲ್ಲೇ ಸಾವನ್ನಪ್ಪಿದರು. ಅವರ ಮಗಳನ್ನು ಚಿಕಿತ್ಸೆಗಾಗಿ ಇಂದೋರ್‌ನ ಆಸ್ಪತ್ರೆಗೆ ಸಾಗಿಸಲಾಯಿತು. ಘಟನೆ ಬಳಿಕ ರೈಲ್ವೆ ಹಳಿ ಮೇಲೆ ಸುಭಾಷ್ ಖರಾಡಿ ಮೃತದೇಹ ಸಿಕ್ಕಿದ್ದು ಆತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಪ್ರೇಮ ಸಂಬಂಧದಿಂದಾಗಿ ಈ ದುರಂತ ಸಾವುಗಳು ಸಂಭವಿಸಿವೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಆದಾಗ್ಯೂ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.