ನೋ-ಪಾರ್ಕಿಂಗ್ ಜಾಗದಲ್ಲಿ ಬೈಕ್ ನಿಲ್ಲಿಸಿದ್ದ ಕಾರಣಕ್ಕೆ ಸಂಚಾರಿ ಪೊಲೀಸರಿಗೆ ದಂಡ ಕಟ್ಟಬೇಕಾಗಿ ಬಂದಿದ್ದಕ್ಕೆ ಹತಾಶನಾದ ಇಂಜಿನಿಯರ್ ಒಬ್ಬರು ಸಬ್‌ಇನ್ಸ್‌ಪೆಕ್ಟರ್ ಒಬ್ಬರಿಗೆ ಚೂರಿಯಲ್ಲಿ ಇರಿದ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.
ಹರ್ಷ್ ಮೀನಾ ಹೆಸರಿನ ಈ ಯುವಕ ಬಿಟೆಕ್ ಪದವಿ ಪೈರೈಸಿ ಎಂಟೆಕ್ ಮಾಡಲು ಸಿದ್ಧತೆ ನಡೆಸುತ್ತಿದ್ದರು.
ಭೋಪಾಲ್‌ನ ಜ್ಯೋತಿ ಟಾಕೀಸ್ ಬಳಿಯಲ್ಲಿ ಪಾರ್ಕಿಂಗ್ ನಿಷೇಧವಿದ್ದ ಜಾಗವೊಂದರಲ್ಲಿ ಪಾರ್ಕ್ ಮಾಡಿದ್ದ ಕಾರಣ ಈ ಯುವಕನ ಬೈಕ್‌ಅನ್ನು ಪೊಲೀಸರು ಕ್ರೇನ್ ಬಳಸಿ ಟೋ ಮಾಡಿಕೊಂಡು ಹೋಗಿದ್ದರು. ವಿಚಾರ ತಿಳಿದ ಬಳಿಕ ಹತ್ತಿರದ ಪೊಲೀಸ್ ಠಾಣೆಗೆ ಧಾವಿಸಿದ ಮೀನಾಗೆ 600 ರೂಪಾಯಿ ದಂಡ ಕಟ್ಟಿ ವಾಹನದ ನೋಂದಣಿ ದಾಖಲೆಗಳನ್ನು ತೋರಲು ಸಂಚಾರಿ ಪೊಲೀಸ್ ಶ್ರೀರಾಮ್ ದುಬೇ ಕೇಳಿದ್ದಾರೆ. ಆ ವೇಳೆ ಮೀನಾ ಬಳಿಯಲ್ಲಿ ದಾಖಲೆಗಳಾಗಲೀ ದುಡ್ಡಾಗಲೀ ಇಲ್ಲದೇ ಇದ್ದ ಕಾರಣ ಮನೆಗೆ ತೆರಳಿದ್ದಾರೆ.
ಮನೆಯಿಂದ ಮರಳುವಾಗ ದುಡ್ಡಿನೊಂದಿಗೆ ಚೂರಿಯೊಂದನ್ನು ತಂದ ಮೀನಾ, ದಂಡ ಕಟ್ಟಿ ತಮ್ಮ ಬೈಕ್ ಬಿಡಿಸಿಕೊಂಡು ಮರಳುತ್ತಿದ್ದ ವೇಳೆ ದುಬೇ ಎದೆಗೆ ಚೂರಿಯಲ್ಲಿ ಇರಿದು ಅಲ್ಲಿಂದ ಪರಾರಿಯಾಗಲು ಮುಂದಾಗಿದ್ದಾರೆ. ಆದರೆ ಸ್ಥಳದಲ್ಲೇ ಇದ್ದ ಸಂಚಾರಿ ಪೊಲೀಸ್ ಸಿಬ್ಬಂದಿ ಮೀನಾನನ್ನು ಹಿಡಿದುಕೊಂಡಿದ್ದಾರೆ.
ದುಬೇರನ್ನು ಹತ್ತಿರದ ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಪಾದಿತನ ವಿರುದ್ಧ ಎಫ್‌ಐಆರ್ ದಾಖಲಿಸಿ ಕೋರ್ಟ್‌ಗೆ ಹಾಜರುಪಡಿಸಲಾಗಿದೆ.