ನವದೆಹಲಿ: ಸುಳ್ಳು ಪ್ರಮಾಣ ಪತ್ರ ಸಲ್ಲಿಸುವ ಮೂಲಕ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಹೆಚ್ಚು ಅವಕಾಶ ಪಡೆದುಕೊಂಡ ಆರೋಪದ ಮೇಲೆ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವುದು ಸೇರಿದಂತೆ ಹಲವು ಕ್ರಮಗಳನ್ನು ಕೇಂದ್ರ ಲೋಕಸೇವಾ ಆಯೋಗ ಕೈಗೊಂಡಿದೆ.
ಅವರನ್ನು ನಾಗರಿಕ ಸೇವಾ ಪರೀಕ್ಷೆಯಿಂದ ಡಿಬಾರ್ ಮಾಡಲಾಗಿದ್ದು, ಕಾನೂನು ಕ್ರಮ ಕೈಗೊಳ್ಳಲಾಗಿದೆ. ದೆಹಲಿ ಪೊಲೀಸರಿಗೆ ಗುರುವಾರವೇ ದೂರು ನೀಡಲಾಗಿದೆ. ದೂರು ಆಧರಿಸಿ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಭಾರತೀಯ ನ್ಯಾಯ ಸಂಹಿತೆ, ಮಾಹಿತಿ ತಂತ್ರಜ್ಞಾನ ಕಾಯ್ದೆ, ಅಂಗವಿಕಲರ ಕಾನೂನಿನಡಿ ಪೋರ್ಜರಿ, ವಂಚನೆ, ವಿಕಲಚೇತನರ ಕೋಟಾ ದುರ್ಬಳಕೆ ಆರೋಪದ ಮೇಲೆ ಪೂಜಾ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಮಹಾರಾಷ್ಟ್ರದಲ್ಲಿ 2023ರ ಬ್ಯಾಚ್ ಪ್ರೊಬೇಷನರಿ ಅಧಿಕಾರಿಯಾಗಿರುವ ಪೂಜಾ ನೀಡಿದ್ದ ಸೌಲಭ್ಯಕ್ಕಿಂತ ಹೆಚ್ಚಿನ ಸೌಲಭ್ಯಗಳನ್ನು ಪಡೆಯಲು ಮುಂದಾಗಿದ್ದರು. ತಮ್ಮ ಖಾಸಗಿ ಆಡಿ ಕಾರಿನ ಮೇಲೆ ಮಹಾರಾಷ್ಟ್ರ ಸರ್ಕಾರ ಎಂದು ಬರೆಸಿ ರೆಡ್ ಲೈಟ್ ಹಾಕಿಸಿಕೊಂಡಿದ್ದರು.