ನವದೆಹಲಿ: ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರ ನೇಮಕಾತಿ ಕುರಿತ ವಿವಾದ ಮತ್ತು ಆರೋಪಗಳು ಕೇಳಿ ಬಂದಿರುವ ಹೊತ್ತಲ್ಲೇ ಕೇಂದ್ರ ಲೋಕಸೇವಾ ಆಯೋಗ ಅಧ್ಯಕ್ಷ ಮನೋಜ್ ಸೋನಿ ವೈಯಕ್ತಿಕ ಕಾರಣ ನೀಡಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
2017ರಲ್ಲಿ ಯುಪಿಎಸ್ಸಿ ಅಧ್ಯಕ್ಷರಾದ ಮನೋಜ್ ಸೋನಿ ಅವರ ಅಧಿಕಾರ ಅವಧಿ 2029 ರ ಮೇನಲ್ಲಿ ಮುಗಿಯಬೇಕಿತ್ತು. 5 ವರ್ಷಗಳ ಮೊದಲೇ ಅವರು ರಾಜೀನಾಮೆ ನೀಡಿದ್ದಾರೆ. ಪೂಜಾ ಖೇಡ್ಕರ್ ವಿವಾದದ ಬಳಿಕ ಕೇಂದ್ರ ಲೋಕಸೇವಾ ಆಯೋಗದ ವಿವಾದ ಮತ್ತು ಅದರ ಸುತ್ತ ಕೇಳಿ ಬರುತ್ತಿರುವ ಆರೋಪಗಳು ಮತ್ತು ನನ್ನ ರಾಜೀನಾಮೆಗೂ ಯಾವುದೇ ಸಂಬಂಧವಿಲ್ಲ ಎಂದು ಮನೋಜ್ ಸೋನಿ ತಿಳಿಸಿದ್ದಾರೆ.
15 ದಿನಗಳ ಹಿಂದೆಯೇ ವೈಯಕ್ತಿಕ ಕಾರಣ ಉಲ್ಲೇಖಿಸಿ ಅವರು ರಾಜೀನಾಮೆ ನೀಡಿದ್ದು, ಅದಿನ್ನೂ ಅಂಗೀಕಾರವಾಗಿಲ್ಲವೆಂದು ಹೇಳಲಾಗಿದೆ. ಈ ಬೆಳವಣಿಗೆ ಬಗ್ಗೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಬಿಜೆಪಿ ಮತ್ತು ಆರ್.ಎಸ್.ಎಸ್. ಸಾಂವಿಧಾನಿಕ ಸಂಸ್ಥೆಗಳ ಮೇಲೆ ಹಕ್ಕು ಸಾಧಿಸಲು ಮುಂದಾಗಿವೆ. ಅಂತಹ ಸಂಸ್ಥೆಗಳ ಘನತೆ, ಸಮಗ್ರತೆ, ಸಾಯುತ್ತತೆಗೆ ಧಕ್ಕೆ ತರುತ್ತಿವೆ ಎಂದು ಆರೋಪಿಸಿದೆ.