ನವದೆಹಲಿ: ಯುಪಿಎಸ್ಸಿ ಸಂದರ್ಶನದಲ್ಲಿ ವಿಫಲವಾದರೂ ಉದ್ಯೋಗವಕಾಶ ಕಲ್ಪಿಸುವ ಬಗ್ಗೆ ಕೇಂದ್ರ ಸರ್ಕಾರ, ಕೇಂದ್ರ ಲೋಕಸೇವಾ ಆಯೋಗ ಶುಭ ಸುದ್ದಿ ನೀಡಿವೆ.
ಭಾರತೀಯ ನಾಗರಿಕ ಸೇವಾ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಸಂದರ್ಶನದಲ್ಲಿ ವಿಫಲವಾದರೂ ಉದ್ಯೋಗಾವಕಾಶವನ್ನು ಕಲ್ಪಿಸುವ ಬಗ್ಗೆ ಕೇಂದ್ರ ಸರ್ಕಾರ ಮತ್ತು ಕೇಂದ್ರ ಲೋಕಸೇವಾ ಆಯೋಗದಿಂದ ಮಹತ್ವದ ಕ್ರಮ ಕೈಗೊಳ್ಳಲಾಗಿದೆ. ಐಎಎಸ್ ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಳಲ್ಲಿ ಅರ್ಹತೆ ಗಳಿಸಿ ಸಂದರ್ಶನ, ವ್ಯಕ್ತಿತ್ವ ಪರೀಕ್ಷೆ ಹಂತದಲ್ಲಿ ವಿಫಲವಾದ ಅಭ್ಯರ್ಥಿಗಳಿಗೆ ಸರ್ಕಾರದ ಬೇರೆ ವಿಭಾಗ ಹಾಗೂ ಖಾಸಗಿ ವಲಯದಲ್ಲಿ ಕೆಲಸಕ್ಕೆ ಸೇರುವ ಅವಕಾಶ ಸಿಗಲಿದೆ.
ಅಭ್ಯರ್ಥಿಗಳು ಗಳಿಸಿದ ಅಂಕ ಹಾಗೂ ಮಾಹಿತಿಯನ್ನು ಆನ್ಲೈನ್ ನಲ್ಲಿ ಪ್ರಕಟಿಸುವ ಮೂಲಕ ಸರ್ಕಾರದ ಬೇರೆ ವಿಭಾಗ ಮತ್ತು ಖಾಸಗಿ ವಲಯದಲ್ಲಿ ಉದ್ಯೋಗವಕಾಶ ನೀಡಲು ಅನುಕೂಲವಾಗುವಂತೆ ಆಯೋಗದ ಪ್ರಸ್ತಾವನೆಗೆ ಸರ್ಕಾರ ಅನುಮೋದನೆ ನೀಡಿದೆ. ಪ್ರತಿಭಾವಂತರು ಸಂದರ್ಶನದಲ್ಲಿ ವಿಫಲರಾಗಿ ಉದ್ಯೋಗ ಅವಕಾಶದಿಂದ ವಂಚಿತರಾಗುತ್ತಿದ್ದರು. ಅವರ ಮಾಹಿತಿಯನ್ನು ಪ್ರಕಟಿಸಿ ಬೇರೆ ವಲಯದಲ್ಲಿ ಅವಕಾಶ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು.
ನ್ಯಾಷನಲ್ ಇನ್ಫರ್ಮ್ಯಾಟಿಕ್ಸ್ ಕೇಂದ್ರ ಅಭಿವೃದ್ಧಿಪಡಿಸಿದ ಇಂಟಿಗ್ರೇಟೆಡ್ ಇನ್ಫಾರ್ಮಶನ್ ಸಿಸ್ಟಮ್ ಗೆ ಅಭ್ಯರ್ಥಿಗಳ ಮಾಹಿತಿಯನ್ನು ಅವರು ಒಪ್ಪಿಗೆ ಸೂಚಿಸಿದರೆ ಪ್ರಕಟಿಸಲಾಗುವುದು. ಇದರಿಂದ ಬೇರೆ ಉದ್ಯೋಗದಾತರು ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.