ನವದೆಹಲಿ: ಕೇಂದ್ರ ಲೋಕಸೇವಾ ಆಯೋಗವು(UPSC) ನಾಗರಿಕ ಸೇವಾ ಪೂರ್ವಭಾವಿ ಪರೀಕ್ಷೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯಲ್ಲಿ ಕೆಲವು ಬದಲಾವಣೆ ಮಾಡಿದೆ. ಅರ್ಜಿ ಸಲ್ಲಿಕೆಗೆ ತಾಂತ್ರಿಕ ತೊಡಕು ಉಂಟಾದ ಹಿನ್ನೆಲೆಯಲ್ಲಿ ಈ ಬದಲಾವಣೆ ಮಾಡಲಾಗಿದೆ.
ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಸಂದರ್ಭದಲ್ಲಿ ಎದುರಾಗುವ ಸಮಸ್ಯೆಗಳ ಕುರಿತು ನೀಡಿದ ದೂರು ಹಿನ್ನೆಲೆಯಲ್ಲಿ ಒಂದೇ ಬಾರಿಗೆ ನೋಂದಣಿ ಮಾಡಿಕೊಳ್ಳುವ ವ್ಯವಸ್ಥೆಯಲ್ಲಿ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ.
ಹೆಸರು, ಜನ್ಮ ದಿನಾಂಕ, ತಂದೆಯ ಹೆಸರು, ತಾಯಿಯ ಹೆಸರು, ಮೊಬೈಲ್ ನಂಬರ್, ಇ-ಮೇಲ್ ಅನ್ನು ತಿದ್ದುಪಡಿ ಮಾಡಲು ಅವಕಾಶ ಇರುವುದಿಲ್ಲ. ಅಭ್ಯರ್ಥಿಯ ಮೊಬೈಲ್ ಸಂಖ್ಯೆ ಬದಲಾಗಿದ್ದಲ್ಲಿ ಇ-ಮೇಲ್ ಮೂಲಕ ಅದನ್ನು ಬದಲಾವಣೆ ಮಾಡಬಹುದಾಗಿದೆ. ಇದಕ್ಕಾಗಿ ಇ- ಮೇಲ್ ಗೆ ಒಟಿಪಿ ಬರುತ್ತದೆ ಎಂದು ಕೇಂದ್ರ ಲೋಕಸೇವಾ ಆಯೋಗ ತಿಳಿಸಿದೆ.
ಅಭ್ಯರ್ಥಿಯ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಖಾತೆ ಎರಡೂ ಇಲ್ಲದಿದ್ದರೆ ಅಂಕಪಟ್ಟಿ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಪಾಸ್ಪೋರ್ಟ್, ವಾಹನ ಚಾಲನ ಪರವಾನಿಗೆ ಇವುಗಳಲ್ಲಿ ಒಂದನ್ನು ಬಳಸಿ ಭಾವಚಿತ್ರದೊಂದಿಗೆ ನಿಗದಿತ ನಮೂನೆಯಲ್ಲಿ ಆಯೋಗಕ್ಕೆ ಮನವಿ ಮಾಡಬಹುದಾಗಿದೆ. ಫೆಬ್ರವರಿ 18ರವರೆಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಿಸಲಾಗಿದೆ.