ಗೂಗಲ್ ಪೇ, ಫೋನ್ ಪೇ, ಪೇಟಿಎಂ ಮೂಲಕ ಹಣ ಪಾವತಿಸುವ ನೀವು ಇದರ ಮೇಲೆ ವಹಿವಾಟು ಶುಲ್ಕ ವಿಧಿಸಿದರೆ ಈ ಅಪ್ಲಿಕೇಷನ್ ಬಳಕೆಯನ್ನು ಮುಂದುವರೆಸುತ್ತೀರಾ ? ಇಂಥದ್ದೊಂದು ಪ್ರಶ್ನೆಯನ್ನ ನಿಮ್ಮ ಮುಂದಿಟ್ಟರೆ,
ಉತ್ತರವೇನಾಗಿರುತ್ತದೆ ? ನಿಮ್ಮ ಉತ್ತರ ಏನೇ ಇರಲಿ, ಲೋಕಲ್ ಸರ್ಕಲ್ಸ್ ಯುಪಿಐ ಬಳಕೆದಾರರೊಂದಿಗೆ ನಡೆಸಿದ ಇತ್ತೀಚಿನ ಸಮೀಕ್ಷೆಯು ಭಾರತದಲ್ಲಿ UPI ಪಾವತಿಗಳ ಭವಿಷ್ಯದ ಕುರಿತು ಕೆಲವು ಕುತೂಹಲಕಾರಿ ಫಲಿತಾಂಶಗಳನ್ನು ತೋರಿಸಿದೆ.
ವಹಿವಾಟು ಶುಲ್ಕವನ್ನು ವಿಧಿಸಿದರೆ ಸೇವೆಯನ್ನು ಬಳಸುವುದನ್ನು ಮುಂದುವರಿಸುತ್ತೀರಾ ಎಂದು ಸಮೀಕ್ಷೆಯಲ್ಲಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ, 75% ರಷ್ಟು ಬಳಕೆದಾರರು ಪ್ರಸ್ತಾವನೆಗೆ ವಿರುದ್ಧವಾಗಿ ಮತ ಚಲಾಯಿಸಿದ್ದಾರೆ. ಹೀಗಾಗಿ ಪ್ರಸ್ತಾಪವು ಜಾರಿಗೆ ಬಂದರೆ ತಕ್ಷಣವೇ ಗೂಗಲ್ ಪೇ, ಫೋನ್ ಪೇ ಮತ್ತು ಪೇಟಿಎಂನಂತಹ ಅಪ್ಲಿಕೇಶನ್‌ಗಳನ್ನು ಬಳಸುವುದನ್ನು ನಿಲ್ಲಿಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಆಶ್ಚರ್ಯಕರ ಸಂಗತಿಯೆಂದರೆ 22% ಬಳಕೆದಾರರು ತಮ್ಮ ಮೇಲೆ ವಿಧಿಸಲಾಗುವ ಕೆಲವು ರೀತಿಯ ವಹಿವಾಟು ಶುಲ್ಕದ ಪರವಾಗಿ ಮತ ಚಲಾಯಿಸಿದ್ದಾರೆ.
ಈ ಸಮೀಕ್ಷೆಯನ್ನು 308 ಜಿಲ್ಲೆಗಳಲ್ಲಿ ನಡೆಸಲಾಗಿದೆ. 42,000 ಕ್ಕಿಂತ ಹೆಚ್ಚು ಪ್ರತಿಕ್ರಿಯೆಗಳನ್ನು ಸಂಗ್ರಹಿಸಲಾಗಿದೆ. ಈ ಪ್ರತಿಕ್ರಿಯೆಯ ಗಾತ್ರವು ದೊಡ್ಡದಾಗಿ ಕಾಣಿಸಿದರೂ ವಾಸ್ತವದಲ್ಲಿ UPI ಬಳಕೆದಾರರ ಒಟ್ಟು ಸಂಖ್ಯೆಯೊಂದಿಗೆ ಹೋಲಿಸಿದಾಗ ಸಮೀಕ್ಷೆಗೆ ಪ್ರತಿಕ್ರಿಯೆಯು ಚಿಕ್ಕದಾಗಿದೆ.
ಸದ್ಯಕ್ಕೆ ಭಾರತದಲ್ಲಿನ ಒಟ್ಟು UPI ವಹಿವಾಟುಗಳು 100 ಬಿಲಿಯನ್ ಗಡಿಯನ್ನು ದಾಟಿವೆ. ಈ ಸಮೀಕ್ಷೆಯ ವಿವರವಾದ ಫಲಿತಾಂಶಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI), ಮತ್ತು ಹಣಕಾಸು ಸಚಿವಾಲಯಕ್ಕೆ ಒದಗಿಸಲಾಗುತ್ತದೆ. ಇದು ಸಾರ್ವಜನಿಕರ ಮನಸ್ಥಿತಿಯನ್ನು ನಿರ್ಣಯಿಸಲು ಸರ್ಕಾರಕ್ಕೆ ಸಹಾಯ ಮಾಡುತ್ತದೆ ಮತ್ತು ಭವಿಷ್ಯದಲ್ಲಿ UPI ಗೆ ಯಾವುದೇ ರೀತಿಯ ವಹಿವಾಟು ಶುಲ್ಕವನ್ನು ಸೇರಿಸದಿರುವ ಸಾರ್ವಜನಿಕ ಅಭಿಪ್ರಾಯವನ್ನು ಸರ್ಕಾರವು ಪರಿಗಣಿಸಬಹುದಾಗಿದೆ.