ಏಪ್ರಿಲ್ನಲ್ಲಿ ಲಾಕ್ಡೌನ್ ಆದೇಶ ಜಾರಿಗೆ ಬಂದಾಗಿನಿಂದ ನಟ ಹಾಗೂ ನಿರ್ದೇಶಕ ಉಪೇಂದ್ರ ಉಪ್ಪಿ ಫೌಂಡೇಶನ್ ಮೂಲಕ ದಿನಗೂಲಿ ಕಾರ್ಮಿಕರಿಗೆ ರೇಷನ್ ಕಿಟ್, ಧನಸಹಾಯ, ತರಕಾರಿ ಸೇರಿದಂತೆ ಸಾಕಷ್ಟು ರೀತಿಯಲ್ಲಿ ಸಹಾಯ ಮಾಡುತ್ತಾ ಬಂದಿದ್ದಾರೆ. ಉಪೇಂದ್ರರ ಈ ಮಾನವೀಯ ಕಾರ್ಯಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗ್ತಿದೆ.
ಉಪೇಂದ್ರ ಇದೀಗ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸುವ ಕಾರ್ಯಕ್ಕೆ ಅಂತ್ಯ ಹಾಡಿದ್ದಾರೆ. ಈ ವಿಚಾರವನ್ನ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿರುವ ನಟ, ಇಲ್ಲಿಯವರೆಗೆ ನಾವು ಮನವಿ ಮಾಡದೇ ಇದ್ದರೂ ಸಹ, ಕೆಲ ಸಹೃದಯಿಗಳು ನಮಗೆ ತರಕಾರಿ, ಹಣ್ಣು, ದಿನಸಿ ಹಾಗೂ ಹಣ ಸಹಾಯವನ್ನ ಮಾಡಿ ಇದನ್ನ ಅವಶ್ಯವಿರುವವರಿಗೆ ಒಪ್ಪಿಸಿ ಎಂದು ಹೇಳುತ್ತಿದ್ದರು, ಅವೆಲ್ಲವನ್ನೂ ಉಪ್ಪಿ ಫೌಂಡೇಶನ್ ಜನರಿಗೆ ತಲುಪಿಸುವ ಕಾರ್ಯ ಮಾಡಿದೆ. ಅಲ್ಲದೇ ಈ ಕೆಲಸವನ್ನ ಮುಂದುವರಿಸುತ್ತೇನೆ. ನಿಮ್ಮೆಲ್ಲರ ಸಹಕಾರಕ್ಕೆ ಧನ್ಯವಾದಗಳು.
ಆದರೆ ಈಗಿನಿಂದ ನೀವು ಯಾರಿಗಾದರೂ ಸಹಾಯ ಮಾಡಲು ಬಯಸಿದ್ರೆ ದಯಮಾಡಿ ನಿಮ್ಮ ಸುತ್ತಮುತ್ತ ಇರುವವರಿಗೆ ನೀಡಿ. ನಾವು ಜನರಿಂದ ಹಣ ಹಾಗೂ ವಸ್ತುಗಳನ್ನ ಸ್ವೀಕರಿಸೋದನ್ನ ನಿಲ್ಲಿಸಿದ್ದೇವೆ. ಇಲ್ಲಿಯವರೆಗೆ ನಾವು ಜನರಿಂದ ಸಂಗ್ರಹಿಸಿದ ಹಣದ ಸಂಪೂರ್ಣ ಮಾಹಿತಿಯನ್ನ ಸದ್ಯದಲ್ಲೇ ಬಹಿರಂಗ ಪಡಿಸುತ್ತೇವೆ, ನಿಮ್ಮೆಲ್ಲರ ಸಹಾಯಕ್ಕೆ ಮತ್ತೊಮ್ಮೆ ಧನ್ಯವಾದ ಎಂದು ಬರೆದಿದ್ದಾರೆ.