ದಾವಣಗೆರೆ: ಗ್ಯಾರಂಟಿ ಯೋಜನೆ ಫಲಾನುಭವಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಬ್ಯಾಂಕ್ ಕೆವೈಸಿ, ಬಯೋಮೆಟ್ರಿಕ್ ಮೂಲಕ ಅವರ ಖಾತೆಗೆ ಹಣ ಜಮೆಯಾಗುವಂತೆ ಕ್ರಮ ವಹಿಸಲಾಗುವುದೆಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಮನೂರು ಟಿ. ಬಸವರಾಜ ತಿಳಿಸಿದರು.
ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಹಶೀಲ್ದಾರರು ಹಾಗೂ ಉಪವಿಭಾಗಾಧಿಕಾರಿಗಳು ಜಂಟಿಯಾಗಿ ಎಲ್ಲಾ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪಡಿತರ ವಿತರಣೆ, ಪಡಿತರ ಧಾನ್ಯಗಳ ವಿತರಣೆಯಲ್ಲಿ ಆಗುವ ತೂಕದ ವ್ಯತ್ಯಾಸ, ಆಹಾರಧಾನ್ಯಗಳ ಗುಣಮಟ್ಟ ಪರಿಶೀಲನೆ ಮಾಡುವಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ. ಇಟ್ನಾಳ್ ಮಾತನಾಡಿ, ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಪ್ರತಿಯೊಬ್ಬ ಅರ್ಹ ನಾಗರಿಕರಿಗೂ ಸಿಗುವಂತಾಗಬೇಕು. ಆದ್ದರಿಂದ ಜಿಲ್ಲೆಯ ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯೋಜನೆಗಳ ಮಾಹಿತಿ ಕುರಿತು ಆಂದೋಲನ ಕೈಗೊಳ್ಳಬೇಕೆಂದು ಎಲ್ಲಾ ಅಧಿಕಾರಿಗಳಿಗೆ ಸೂಚಿಸಿದರು.