ಯೂಟ್ಯೂಬ್ ಮೂಲಕ 1 ಕೋಟಿ ರೂ. ಗಳಿಸಿದ ವ್ಯಕ್ತಿಯ ಮನೆಗೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿರೋ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ದಾಳಿ ವೇಳೆ ಬರೇಲಿಯ ಯೂಟ್ಯೂಬರ್ ಮನೆಯಲ್ಲಿ 24 ಲಕ್ಷ ರೂ. ನಗದು ಪತ್ತೆಯಾಗಿದೆ.
ತಸ್ಲೀಂ ಎಂಬುವವರು ಕೆಲ ವರ್ಷಗಳಿಂದ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದು ಸುಮಾರು 1 ಕೋಟಿ ರೂ. ಗಳಿಸಿದ್ದರು ಎಂದು ತನಿಖೆ ನಡೆಸುತ್ತಿರುವ ಅಧಿಕಾರಿಗಳು ತಿಳಿಸಿದ್ದಾರೆ.
ಯೂಟ್ಯೂಬರ್ ಕಾನೂನುಬಾಹಿರ ವಿಧಾನಗಳ ಮೂಲಕ ಹಣ ಸಂಪಾದಿಸಿದ್ದಾರೆ ಎಂದು ಆರೋಪಿಸಲಾಗಿದೆ, ಆದರೆ ಇದನ್ನು ಅವರ ಕುಟುಂಬವು ನಿರಾಕರಿಸಿದೆ. ತಸ್ಲೀಮ್ ಷೇರು ಮಾರುಕಟ್ಟೆಗೆ ಸಂಬಂಧಿಸಿದ ವೀಡಿಯೊಗಳನ್ನು ಮಾಡುತ್ತಾರೆ ಮತ್ತು ತನ್ನ ಆದಾಯದ ಮೇಲೆ ಆದಾಯ ತೆರಿಗೆಯನ್ನು ಸಹ ಪಾವತಿಸುತ್ತಾರೆ ಎಂದು ಅವರ ಸಹೋದರ ಹೇಳಿಕೊಂಡಿದ್ದಾರೆ. ‘ಟ್ರೇಡಿಂಗ್ ಹಬ್ 3.0’ ಎಂಬ ಯೂಟ್ಯೂಬ್ ಚಾನೆಲ್ ಅನ್ನು ತನ್ನ ಸೋದರ ನಿರ್ವಹಿಸುತ್ತಿರುವುದಾಗಿ ಫಿರೋಜ್ ಹೇಳಿದ್ದಾರೆ.
ಯೂಟ್ಯೂಬ್‌ನ ಒಟ್ಟು ಆದಾಯ 1.2 ಕೋಟಿ ರೂ. ಗೆ ಅವರು ಈಗಾಗಲೇ 4 ಲಕ್ಷ ರೂ. ತೆರಿಗೆ ಪಾವತಿಸಿದ್ದಾರೆ ಎಂದು ಹೇಳಿದ್ದಾರೆ. ಈ ದಾಳಿಯು ಯೋಜಿತ ಪಿತೂರಿಯಾಗಿದೆ ಎಂದು ಫಿರೋಜ್ ಹೇಳಿದರೆ, ತನ್ನ ಮಗನನ್ನು ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದು ತಸ್ಲೀಮ್ ತಾಯಿ ಹೇಳಿಕೊಂಡಿದ್ದಾರೆ.