ಮೀರತ್: ಉತ್ತರ ಪ್ರದೇಶದ ಮೀರತ್ ಜಿಲ್ಲೆಯಿಂದ ವರದಿಯಾದ ಆಘಾತಕಾರಿ ಘಟನೆಯೊಂದರಲ್ಲಿ ಗೆಳತಿಯನ್ನು ಭೇಟಿ ಮಾಡಲು ಆಕೆಯ ಮನೆಗೆ ಹೋಗಿದ್ದ 19 ವರ್ಷದ ವಿದ್ಯಾರ್ಥಿಯನ್ನು ಹತ್ಯೆ ಮಾಡಲಾಗಿದೆ.
ಮೀರಜ್ ಜಿಲ್ಲೆಯ ಮಾವಾನಾ ಪೊಲೀಸ್ ಠಾಣೆ ವ್ಯಾಪ್ತಿಯ ಆಟೋರಾ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 5 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅಂತಿಮ ವರ್ಷದ ಬಿಎ ಓದುತ್ತಿದ್ದ ಅಭಿಷೇಕ್ ಗುರ್ಜರ್ ಮೃತಪಟ್ಟ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ತನ್ನ ಗ್ರಾಮದ ಬಾಲಕಿಯೊಂದಿಗೆ ಅಭಿಷೇಕ್ ಜೊತೆಗೆ ಸಂಬಂಧವಿತ್ತು. ಆಕೆಯೊಂದಿಗ ಮಾತನಾಡುವುದನ್ನು ಹುಡುಗಿ ಮನೆಯವರು ಗಮನಿಸಿದ್ದರು. ಹಲವು ಬಾರಿ ಆತನಿಗೆ ವಾರ್ನಿಂಗ್ ಮಾಡಿದ್ದರೂ, ಆತ ನಿರ್ಲಕ್ಷಿಸಿದ್ದ.
ಹುಡುಗಿಯ ಮೊಬೈಲ್ ಪರಿಶೀಲಿಸಿದಾಗ 12 ಸಲ ಕರೆ ಮಾಡಿರುವುದು ಆಖೆಯ ಕುಟುಂಬದವರಿಗೆ ಗೊತ್ತಾಗಿತ್ತು. ಬಾಲಕಿಯ ಮೂಲಕ ಅಭಿಷೇಕ್ ನನ್ನು ಮನೆಗೆ ಕರೆಸಿಕೊಂಡ ಕುಟುಂಬದ ಸದಸ್ಯರು ಕ್ರೂರವಾಗಿ ಥಳಿಸಿ ಹತ್ಯೆ ಮಾಡಿದ್ದಾರೆ. ಮೃತದೇಹವನ್ನು ಚೀಲದಲ್ಲಿ ತುಂಬಿ ಕೆರೆಯಲ್ಲಿ ಎಸೆದಿದ್ದಾರೆ.
ಗ್ರಾಮದಲ್ಲಿ ಭೀತಿಯ ವಾತಾವರಣ ಉಂಟಾಗಿದ್ದು, ಬಳಿಕ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ಪೊಲೀಸರು ಬಾಲಕಿಯ ತಂದೆ ಅನುಜ್, ಅಜ್ಜ ಮಹಿಪಾಲ, ಚಿಕ್ಕಪ್ಪ ಓಂಕಾರ ಮತ್ತು ಸೋದರಸಂಬಂಧಿ ಸೇರಿ 5 ಮಂದಿ ಬಂಧಿಸಿದ್ದಾರೆ.
ಮೀರತ್ ಗ್ರಾಮಾಂತರ ಪೊಲೀಸ್ ಅಧೀಕ್ಷಕ ಕೇಶವ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದು, ವಿಚಾರಣೆ ವೇಳೆ ಆರೋಪಿಗಳು ತಮ್ಮ ಕೃತ್ಯವನ್ನು ಒಪ್ಪಿಕೊಂಡಿದ್ದು ಅವರನ್ನು ಜೈಲಿಗೆ ಕಳುಹಿಸಲಾಗಿದೆ. ಬಾಲಕಿಯ ಕುಟುಂಬದವರು ಯುವಕನಿಗೆ ಹಲವಾರು ಬಾರಿ ಬೆದರಿಕೆ ಹಾಕಿದ್ದಾಗಿ ಅಭಿಷೇಕ್ ತಂದೆ ತಿಳಿಸಿದ್ದಾರೆ. ಶುಕ್ರವಾರ ರಾತ್ರಿ 11 ಗಂಟೆಗೆ ಆಕೆಯ ಮನೆಗೆ ಕರೆಸಿಕೊಂಡು ಕೊಲೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.