ಉತ್ತರಪ್ರದೇಶದ ಸೀತಾಪುರ ಜಿಲ್ಲೆಯಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ತಂದೆ-ಮಗ ಬೆಂಕಿಹಚ್ಚಿ ಕೊಲೆ ಮಾಡಲು ಯತ್ನಿಸಿದ್ದಾರೆ. ತೀವ್ರ ಸುಟ್ಟ ಗಾಯಗಳಾಗಿರುವ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ನೈಮಿಶಾರಣ್ಯದ ಮಿಶ್ರಿಖ್ ಪ್ರದೇಶದಲ್ಲಿ 30 ವರ್ಷದ ಮಹಿಳೆಯ ಮೇಲೆ 55 ವರ್ಷದ ವ್ಯಕ್ತಿ ತನ್ನ ವಯಸ್ಕ ಮಗನೊಂದಿಗೆ ಸೇರಿ ಇಂತಹ ಕೃತ್ಯ ಎಸಗಿದ್ದಾನೆ.
ಸಿಧೌಲಿ ಪ್ರದೇಶದ ತಾಯಿಯ ಮನೆಯಿಂದ ಮಿಶ್ರಿಖ್ ಗೆ ಮಹಿಳೆ ತೆರಳುತ್ತಿದ್ದ ವೇಳೆ ಆರೋಪಿಗಳಿದ್ದ ಗಾಡಿಯನ್ನು ಹತ್ತಿದ್ದಳು. ಮಿಶ್ರಿಖ್ ಬಳಿ ನಿರ್ಜನ ಪ್ರದೇಶಕ್ಕೆ ಆಕೆಯನ್ನು ಎಳೆದುಕೊಂಡು ಹೋದ ದುಷ್ಕರ್ಮಿಗಳು ಅತ್ಯಾಚಾರ ಎಸಗಿ ಬೆಂಕಿ ಹಚ್ಚಿದ್ದಾರೆ.
ತುರ್ತು ಸೇವೆಯ ಬಗ್ಗೆ ಮಾಹಿತಿ ಬಂದ ಕೂಡಲೇ ಸ್ಥಳಕ್ಕೆ ತೆರಳಿದ್ದು ಮಹಿಳೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ ಶೇಕಡ 30 ರಷ್ಟು ಗಾಯಗಳಾಗಿರುವ ಮಹಿಳೆ ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿರುವುದಾಗಿ ಸೀತಾಪುರ ಪೊಲೀಸ್ ವರಿಷ್ಠಾಧಿಕಾರಿ ಆರ್.ಪಿ. ಸಿಂಗ್ ಹೇಳಿದ್ದು, ತನಿಖೆ ಕೈಗೊಳ್ಳಲಾಗಿದೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.