ಅಮೀರ್ ಖಾನ್‌ರ ಜನಪ್ರಿಯ ಚಲನಚಿತ್ರ 3 ಈಡಿಯಟ್ಸ್‌ನ ದೃಶ್ಯವೊಂದರಲ್ಲಿ ವೈದ್ಯರನ್ನು ವಿಡಿಯೋ ಕಾನ್ಫರೆನ್ಸಿಂಗ್‌ಗೆ ಕರೆದು, ಅವರಿಂದ ನಿದೇರ್ಶನ ಪಡೆಯುತ್ತಾ ಹೆರಿಗೆ ಮಾಡುವಂತೆ ಉತ್ತರ ಪ್ರದೇಶದ ಬಸ್ಸಿನಲ್ಲೊಂದು ನೈಜ ಘಟನೆ ನಡೆದಿದೆ.
ಲಖನೌನಿಂದ ಬಹ್ರೈಚ್‌ನತ್ತ ತೆರಳುತ್ತಿದ್ದ ಬಸ್ಸಿನಲ್ಲಿದ್ದ ತುಂಬು ಗರ್ಭಿಣಿ ರುಕ್ಸಾನಾಗೆ ಪ್ರಸವ ವೇದನೆ ಶುರುವಾಗಿದೆ. ಡಿಸೆಂಬರ್ 3ರಂದು ವೈದ್ಯರನ್ನು ಭೇಟಿಯಾಗಲು ಲಖನೌಗೆ ತೆರಳಿದ್ದ ರುಕ್ಸಾನಾ ಮನೆಗೆ ಮರಳುತ್ತಿದ್ದ ಬಸ್ಸಿನಲ್ಲಿಯೇ ಆಕೆಗೆ ಪ್ರಸವ ಶುರುವಾಗಿದೆ.
ಇಲ್ಲಿನ ಬಡಾಬಂಕಿಯಿಂದ ಬಹ್ರೈಚ್‌ಗೆ ಆಗಮಿಸುವ ಸಂದರ್ಭದಲ್ಲಿ ರುಕ್ಸಾನಾ ಪ್ರಸವವೇದನೆಯಿಂದ ಕೂಗಿಕೊಂಡಿದ್ದಾರೆ. ಆಕೆಯ ಅಳುವನ್ನು ಕೇಳಿಸಿಕೊಂಡ ಸಹಪ್ರಯಾಣಿಕ ಪ್ರಜ್ವಲ್ ತ್ರಿಪಾಠಿ, ವಾಹನದಲ್ಲಿದ್ದ ಇತರರ ಸಹಾಯ ಯಾಚಿಸಿದ್ದಾರೆ.
ಬೆಚ್ಚಿಬೀಳಿಸುವಂತಿದೆ ಈ ಗೋಲ್ಗಾಪ್ಪ ತಿನ್ನುವ ಪರಿ…!
ಇದೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಶಾಲು ಶ್ರೀವಾಸ್ತವ, ನಿವೃತ್ತ ನರ್ಸ್ ಆಗಿರುವ ತಮ್ಮ ಅತ್ತೆಯೊಂದಿಗೆ ವಿಡಿಯೋ ಕಾಲ್ ಮೂಲಕ ಸಂಪರ್ಕ ಸಾಧಿಸಿದ್ದಾರೆ. ತನ್ನ ಅತ್ತೆಯ ಸಲಹೆಗಳಂತೆ ಶಾಲು ಸುರಕ್ಷಿತವಾಗಿ ಹೆರಿಗೆ ಪ್ರಕ್ರಿಯೆಯಾಗುವಂತೆ ನೋಡಿಕೊಂಡಿದ್ದಾರೆ. ತಾಯಿ-ಮಗು ಆರೋಗ್ಯವಾಗಿರುವುದನ್ನು ಕಂಡ ಸಹ ಪ್ರಯಾಣಿಕರು ಶಾಲು ಅವರ ಸಮಯ ಪ್ರಜ್ಞೆಯನ್ನು ಕೊಂಡಾಡಿದ್ದಾರೆ.