
7 ವರ್ಷದ ಹಿಂದೆ ಆಕೆ ಸತ್ತೋಗಿದ್ದಾಳೆ ಎಂದು ಹಲವರು ನಂಬಿದ್ರು. ಆಕೆಯ ಸಾವಿಗೆ ಕಾರಣನಾಗಿದ್ದಾನೆಂದು 7 ವರ್ಷದ ಹಿಂದೆ ವ್ಯಕ್ತಿಯೋರ್ವ ಜೈಲು ಸೇರಿದ್ದ. ಆದರೆ ಕಹಾನಿ ಮೇ ಟ್ವಿಸ್ಟ್ ಎಂಬಂತೆ 7 ವರ್ಷದ ಹಿಂದೆ ಸಾವನ್ನಪ್ಪಿದ್ದಾಳೆ ಎಂದು ನಂಬಲಾಗಿದ್ದ ಮಹಿಳೆ ಜೀವಂತವಿದ್ದಾಳೆ. ಅವಳ ಕೊಲೆ ಆರೋಪದ ಮೇಲೆ ವ್ಯಕ್ತಿ ಜೈಲಲ್ಲಿ ಕಾಲ ಕಳೀತಿದ್ದಾನೆ. ಇಂತಹ ಘಟನೆಗೆ ಸಾಕ್ಷಿಯಾಗಿರೋದು ಉತ್ತರಪ್ರದೇಶ.
ವಿಷ್ಣು ಎಂಬಾತನಿಗೆ ನ್ಯಾಯಾಲಯವು 7 ವರ್ಷಗಳ ಹಿಂದೆ ಕೊಲೆ ಆರೋಪದಡಿ ಜೈಲು ಶಿಕ್ಷೆಯನ್ನು ವಿಧಿಸಿತು. ಮಹಿಳೆಯ ತಂದೆ ಆಗ್ರಾದಲ್ಲಿ ಅಪರಿಚಿತ ಶವವನ್ನು ತಮ್ಮ ಮಗಳು ಎಂದು ಗುರುತಿಸಿದ್ದರು. ಅಪ್ರಾಪ್ತೆಯನ್ನು ಅಪಹರಿಸಿ ಕೊಂದ ಆರೋಪ ಪ್ರಕರಣದಲ್ಲಿ ವಿಷ್ಣು ಜೈಲು ಪಾಲಾಗಿದ್ದ. ಈ ಮಧ್ಯೆ, ವಿಷ್ಣು ಅವರ ತಾಯಿ ತಮ್ಮ ಮಗನಿಗೆ ನ್ಯಾಯ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು.
ಹದಿಹರೆಯದವನಾಗಿದ್ದಾಗ ಮಹಿಳೆಯನ್ನು ಅಪಹರಿಸಿ ಕೊಂದ ಆರೋಪ ಹೊತ್ತಿದ್ದ ಮಗನಿಗೆ ನ್ಯಾಯ ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ಮಹಿಳೆ ಸತ್ತಿಲ್ಲ. ಆಕೆ ಬದುಕಿದ್ದಾಳೆ. ಬೇರೊಬ್ಬನೊಂದಿಗೆ ಮದುವೆಯಾಗಿದ್ದಾಳೆ , ನನ್ನ ಮಗ ನಿರಪರಾಧಿ ಎಂದಿದ್ದರು.
ನಂತರ ವಿಷ್ಣು ತಾಯಿಯ ಅರ್ಜಿಯಂತೆ ಘಟನೆಯ ಕುರಿತು ತನಿಖೆಗೆ ಆದೇಶಿಸಿದಾಗ ಪೊಲೀಸರು ಮಹಿಳೆಯನ್ನು ಅಲಿಘರ್ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಮತ್ತು ಆಕೆಯ ಗುರುತು ಪತ್ತೆಹಚ್ಚಲು ಡಿಎನ್‌ಎ ಪರೀಕ್ಷೆ ಮಾಡಿಸಿದರು. ಮಹಿಳೆಯ ತಂದೆ ಆಕೆಯನ್ನು ತನ್ನ ಮಗಳು ಎಂದು ಗುರುತಿಸಿದ್ದಾರೆ.
ಅಸಲಿಗೆ ಆ ಮಹಿಳೆ ಅಪ್ರಾಪ್ತೆಯಾಗಿದ್ದಾಗ 7 ವರ್ಷದ ಹಿಂದೆ ತನ್ನ ಪ್ರಿಯಕರನೊಂದಿಗೆ ಓಡಿ ಹೋಗಿ ಮದುವೆಯಾಗಿ ಬೇರೆಡೆ ನೆಲೆಸಿದ್ದಳು. ಇದೀಗ ಪೊಲೀಸರ ಸಮಗ್ರ ತನಿಖೆಯಿಂದ ಅಸಲಿ ವಿಚಾರ ಹೊರಗೆ ಬಂದಿದೆ.