ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ನಗರ ಪಂಚಾಯಿತಿ ಚುನಾವಣೆಯಲ್ಲಿ ಕಣಕ್ಕಿಳಿದಿದ್ದ ಮಹಿಳೆಯೊಬ್ಬರು ಪರಾಭವಗೊಂಡರೆಂಬ ಕಾರಣಕ್ಕೆ ಆಕೆಯ ಮಾವ ಹಾಗೂ ಕುಟುಂಬ ಸದಸ್ಯರು ದೊಣ್ಣೆಯಿಂದ ಥಳಿಸಿ ಮನೆಯಿಂದ ಹೊರ ಹಾಕಿರುವ ಘಟನೆ ನಡೆದಿದೆ.
ಸೋಮವಾರದಂದು ಈ ಕುರಿತು ಸಂತ್ರಸ್ತ ಮಹಿಳೆ 31 ವರ್ಷದ ಹೀನಾ ಫರೀದಿ, ಬರೇಲಿ ಜಿಲ್ಲೆಯ ಶೇರ್ಗರ್ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ದೂರು ದಾಖಲಿಸಿದ್ದಾರೆ. ಈಕೆಯ ಪತಿ ನವಾಬ್ ಹಸನ್ ಖಾನ್ ಈ ಭಾಗದಲ್ಲಿ ಜನಪ್ರಿಯ ವ್ಯಕ್ತಿಯಾಗಿದ್ದು, ಈ ಹಿಂದೆ ನಗರ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನ್ನಪ್ಪಿದ್ದರು. ಮೂರು ವರ್ಷಗಳ ಹಿಂದೆ ಆತ ಮೃತಪಟ್ಟಿದ್ದು, ಹೀನಾ ಅವರನ್ನು ಮನೆಯಿಂದ ಹೊರ ಹಾಕಲಾಗಿತ್ತು.
ಇತ್ತೀಚೆಗೆ ಚುನಾವಣೆ ಘೋಷಣೆಯಾದ ಬಳಿಕ ಈ ಕ್ಷೇತ್ರದ ಮೀಸಲನ್ನು ಮಹಿಳೆಗೆ ನಿಗದಿಗೊಳಿಸಿದ್ದು, ಹೀಗಾಗಿ ಹೀನಾ ಅವರನ್ನು ಗಂಡನ ಮನೆಯವರು ಮತ್ತೆ ಕರೆದುಕೊಂಡು ಬಂದಿದ್ದರು. ಚುನಾವಣೆಯಲ್ಲಿ ಹೀನಾ ಸ್ವತಂತ್ರವಾಗಿ ಸ್ಪರ್ಧಿಸಿದ್ದು, ಗಂಡನ ಮನೆಯವರು ಪೂರ್ಣ ಪ್ರಮಾಣದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರೂ ಪರಾಭವಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಥಳಿಸಿ ಮನೆಯಿಂದ ಮತ್ತೆ ಹೊರಹಾಕಲಾಗಿದೆ ಎಂದು ಆರೋಪಿಸಲಾಗಿದೆ.