ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಬರದರಿ ಪ್ರದೇಶದಲ್ಲಿ ಮಹಿಳೆಯೊಬ್ಬರು ತನ್ನ ಮೇಲೆ ಅತ್ಯಾಚಾರವಾಗಿದೆ, ತನ್ನ 12 ವರ್ಷದ ಮಗಳಿಗೆ ಕಿರುಕುಳ ನೀಡಿದ್ದಾರೆ ಮತ್ತು ಈಗ ತಮ್ಮಿಬ್ಬರನ್ನೂ ಬಲವಂತವಾಗಿ ಮತಾಂತರಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ವಿಧವೆ ಆಗಿರುವ ಮಹಿಳೆ ಈ ರೀತಿ ದೂರು ದಾಖಲಿಸಿದ್ದಾರೆ. ಮೂರು ತಿಂಗಳ ಹಿಂದೆ ಇರಾಮ್ ಸೈಫಿ ಎಂಬ ಮಹಿಳೆಯೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾರೆ. ಕ್ರಮೇಣ ಅವರು ಪರಸ್ಪರರ ಮನೆಗಳಿಗೆ ಭೇಟಿ ನೀಡಲು ಪ್ರಾರಂಭಿಸಿದರು.
ನಕತಿಯಾದಲ್ಲಿ ವಾಸಿಸುವ ಸೈಫಿ ನಿರ್ದಿಷ್ಟ ಸಮುದಾಯದ ಜನರನ್ನು ತನ್ನ ಮನೆಗೆ ಕರೆತಂದು ಅವರೊಂದಿಗೆ ದೈಹಿಕ ಸಂಬಂಧ ಬೆಳೆಸುವಂತೆ ಒತ್ತಾಯಿಸುತ್ತಿದ್ದಳು. ಆಕೆ ತನ್ನ ಅಶ್ಲೀಲ ವೀಡಿಯೋಗಳನ್ನು ಮಾಡಿ ಅವುಗಳನ್ನು ಬಳಸಿಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಳು ಎಂದು ಮಹಿಳೆ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ.
ಸೈಫಿ ಅವರ ಸಹೋದರ ಬಬ್ಲು ಸೈಫಿ ಕೂಡ ವಿಧವೆಯ ಮನೆಗೆ ಹಲವಾರು ಬಾರಿ ಭೇಟಿ ನೀಡಿದ್ದ. ಆತ ತನ್ನ 12 ವರ್ಷದ ಮಗಳಿಗೆ ಕಿರುಕುಳ ನೀಡಿದ್ದಾನೆ ಮತ್ತು ಆಕೆಯ ಮೇಲೆ ಅತ್ಯಾಚಾರ ಮಾಡಲು ಪ್ರಯತ್ನಿಸಿದ್ದಾನೆ ಎಂದು ದೂರುದಾರ ಮಹಿಳೆ ತಿಳಿಸಿದ್ದಾರೆ.
ಸೈಫಿ, ಮಹಿಳೆಯನ್ನು ಮತ್ತು ಆಕೆಯ ಮಗಳನ್ನು ತನ್ನ ಮನೆಗೆ ಕರೆದು ಅಲ್ಲಿ ಮೌಲ್ವಿ ಸಮ್ಮುಖದಲ್ಲಿ ಮತಾಂತರವಾಗುವಂತೆ ಒತ್ತಾಯಿಸಿದರೆಂದು ಆರೋಪಿಸಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಆರೋಪಿಗಳು ಮಹಿಳೆ ಹಾಗೂ ಆಕೆಯ ಮಗಳಿಗೆ ಥಳಿಸಿದ್ದಾರೆ.
ಪೊಲೀಸರು ಅಪರಿಚಿತ ಧರ್ಮಗುರು ಇರಾಮ್ ಸೈಫಿ, ಬಬ್ಲು ಸೈಫಿ ಮತ್ತು ಇತರರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಮತ್ತು ಉತ್ತರ ಪ್ರದೇಶ ಕಾನೂನುಬಾಹಿರ ಧರ್ಮ ಪರಿವರ್ತನೆಯ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಆರೋಪಿಗಳು ಹಾಗೂ ಅವರ ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆಸಲಾಗುತ್ತಿದ್ದು, ಇನ್ನೂ ಯಾವುದೇ ಸುಳಿವು ಸಿಕ್ಕಿಲ್ಲ.